ಬೆಂಗಳೂರು: ‘ಉಮರ್ ಖಾಲಿದ್ ಆ್ಯಂಡ್ ಹಿಸ್ ವರ್ಲ್ಡ್’ ಪುಸ್ತಕದ ಕುರಿತ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಪಕ್ಷ ಬಿಜೆಪಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ದೊಮ್ಮಲೂರಿನ ಬಿಐಸಿಯಲ್ಲಿ ನಾಳೆ ‘ಉಮರ್ ಖಾಲಿದ್ ಆ್ಯಂಡ್ ಹಿಸ್ ವರ್ಲ್ಡ್’ ಪುಸ್ತಕದ ಕುರಿತ ಕಾರ್ಯಕ್ರಮ ನಿಗದಿಯಾಗಿದೆ. ಇದೇ ವಿಚಾರವಗಿ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ನಟ ಪ್ರಕಾಶ್ ರಾಜ್, ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಹಲವು ಮುಖಂಡರು ನಾಳಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ಮನವಿ ಮಾಡಿದೆ.
ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕನಾಗಿದ್ದ ಉಮರ್ ಖಾಲಿದ್, 2020ರ ದೆಹಲಿ ದಂಗೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ತಿಹಾರ್ ಜೈಲಿನಲ್ಲಿದ್ದಾನೆ ಎಂದು ಬಿಜೆಪಿ ದೂರಿದೆ.
ಉಮರ್ ಖಾಲಿದ್ ಪ್ರಪಂಚ ಎಂಬ ವೇದಿಕೆಯು ಭಯೋತ್ಪಾದನೆ ಕಾಯಿದೆ ಅಡಿ ಬಂಧಿತನಾದ ವ್ಯಕ್ತಿಗೆ ಬೆಂಬಲ ಸೂಚಿಸಲು ಬೆಂಗಳೂರಿನಲ್ಲಿ ವಿಚಾರ ಸಂಕೀರ್ಣ ಏರ್ಪಡಿಸಿದೆ. ದೇಶದಲ್ಲೆಡೆ ಕೇಂದ್ರ ಸರ್ಕಾರ ನಕ್ಸಲರನ್ನು ಬಗ್ಗು ಬಡಿದಿದೆ. ಆದರೆ ನಗರ ನಕ್ಸಲರು ಮಾತ್ರ ಇನ್ನೂ ಸಕ್ರಿಯವಾಗಿದ್ದು ದೇಶದ್ರೋಹಿಗಳಿಗೆ ಪರೋಕ್ಷವಾಗಿ ಬೆಂಬಲಿಸುವ ಚಟುವಟಿಕೆಯನ್ನು ಮಾಡುತ್ತಿದ್ದಾರೆ. ಉಮರ್ ಖಾಲೀದ್ ಅತ್ಯಂತ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಕಳೆದ ಮೂರು ವರ್ಷದಿಂದ ಈತನಿಗೆ ನ್ಯಾಯಲಯಗಳು ಜಾಮೀನು ನೀಡಲು ನಿರಾಕರಿಸಿರುವುದು ಈತನ ಅಪರಾಧಿ ಚಟುವಟಿಕೆಗೆ ಸಾಕ್ಷಿ. ಈತನನ್ನು ವೈಭವೀಕರಿಸುವುದು ಅಪರಾಧಿಗಳಿಗೆ ಉತ್ತೇಜನ ಕೊಡುವ ದುಷ್ಕೃತ್ಯವಾಗುತ್ತದೆ. ಇಂತಹ ಕಾರ್ಯಕ್ರಮವನ್ನು ನಮ್ಮ ನಗರದಲ್ಲಿ ನಡೆಯುತ್ತಿರುವುದು ಆಘಾತಕಾರಿ ಸಂಗತಿ. ಈಗಾಗಲೇ ನಗರದ ಗೋಡೆಗಳ ಮೇಲೆ ಉಮರ್ ಖಾಲಿದ್ ಬೆಂಬಲಿಸಿ ಗೋಡೆ ಬರಹಗಳನ್ನು ಬರೆಯುತ್ತಿರುವುದು ಇವರ ಜಾಲ ಹರಡುತ್ತಿದ್ದಾರೆ. ನಗರದ ಶಾಂತಿಯನ್ನು ಕಾಪಾಡುವ ಹಿತದೃಷ್ಟಿಯಿಂದ ಇವರ ವಿಚಾರ ಸಂಕಿರಣ ನಡೆಸಲು ನೀಡಿರುವ ಅನುಮತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಬಿಜೆಪಿ ಮನವಿಯಲ್ಲಿ ಒತ್ತಾಯಿಸಿದೆ.
ಒಂದು ವೇಳೆ ಕಾರ್ಯಕ್ರಮ ನಡೆದರೆ ಅಲ್ಲಿ ಉಂಟಾಗುವ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗವಾದರೆ ಬಿಜೆಪಿಯು ಹೊಣೆಯಾಗುವುದಿಲ್ಲ. ನಗರದ ಹಿತದೃಷ್ಟಿಯಿಂದ ನಮ್ಮ ಮನವಿಯನ್ನು ಪರಿಗಣಿಸಿ ಕಾರ್ಯಕ್ರಮವನ್ನು ರದ್ದುಪಡಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಇದೇ ವಿಚಾರವಾಗಿ ಮಾತನಾಡಿದ ಬಿಜೆಪಿ ಸಂಸದ ಪಿ.ಸಿ ಮೋಹನ್, ಉಮರ್ ಖಾಲಿದ್ ಆ್ಯಂಡ್ ಹಿಸ್ ವರ್ಲ್ಡ್ ಪುಸ್ತಕದ ಕುರಿತ ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟರೆ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಉಮರ್ ಖಾಲೀದ್ 2020ರ ದೆಹಲಿ ದಂಗೆಯ ಪ್ರಮುಖ ಆರೋಪಿ. ಕೋರ್ಟ್ ಕೂಡ ಆತನಿಗೆ ಜಾಮೀನು ಕೊಟ್ಟಿಲ್ಲ. ಆತ ದೇಶದ್ರೋಹಿ. ಅವನ ಕುರಿತಾದ ಪುಸ್ತಕ ಬಿಡುಗಡೆಗೆ ದೇಶದ ಯಾವುದೇ ರಾಜ್ಯದಲ್ಲಿ ಅನುಮತು ನೀಡಿಲ್ಲ. ಇಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅನುಮತಿ ಸಿಕ್ಕಿದೆ. ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲದಿಂದಲೇ ಈ ಕಾರ್ಯಕ್ರಮ ನಡೀತಿದೆ. ಹೀಗಾಗಿ ಅನುಮತಿ ಕೊಟ್ಟರೆ ನಾವು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.

