ಬೆಂಗಳೂರು: ಪುತ್ತೂರು ಬಿಜೆಪಿ ಮುಖಂಡ ಜಗನ್ನಾಥ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ಮಗು ಕರುಣಿಸಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆರೋಪಿಗೆ ಖಡಕ್ ಸೂಚನೆ ನೀಡಿದೆ.
ತನ್ನ ವಿರುದ್ಧದ ಪ್ರಕರಣ ರದ್ದು ಮಾಡುವಂತೆ ಕೋರಿ ಆರೋಪಿ ಕೃಷ್ಣ.ಜೆ.ರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ನ್ಯಾಯಪೀಠ, 21 ವರ್ಷದ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ತಾಯಿಯಾಗುವಂತೆ ಮಾಡಿ, ಆಕೆಯ ಜೀವನವನ್ನು ಸಂಪೂರ್ಣವಾಗಿ ನಾಶ ಮಾಡಿದ್ದೀರಿ. ಸಂತ್ರಸ್ತೆ ಹಾಗೂ ಆಕೆಯ ಮಗುವಿನ ಪೋಷಣೆಯ ಸಂಪೂರ್ಣ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದೆ.
ಆರೋಪಿ ಕೃಷ್ಣ ಜೆ.ರಾವ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸಂತ್ರಸ್ತೆ ಮತ್ತು ಆಕೆಯ ಮಗುವಿನ ಪೋಷಣೆಗೆ ಮಾಸಿಕ 75 ಸಾವಿರ ರೂ.ಗಳನ್ನು ಪಾವತಿಸಬೇಕು ಎಂದು ಖಡಕ್ ನಿರ್ದೇಶನ ನೀಡಿದೆ.
ಇದೇ ವೇಳೆ, ಆರೋಪಿಯ ವಿರುದ್ದದ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿದ್ದು, ಸಂತ್ರಸ್ತೆ ಮತ್ತವರ ಕುಟುಂಬಸ್ಥರು, ಬಂಧುಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮುಂದೆ ಹೋಗಬಾರದೆಂದು ನಿರ್ಬಂಧ ವಿಧಿಸಿದೆ.
ಅರ್ಜಿದಾರ ಆರೋಪಿ ಸ್ವತಃ ಅಥವಾ ತನ್ನ ಪೋಷಕರ ಮೂಲಕ ಸಂತ್ರಸ್ತೆ ಹಾಗೂ ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು 75 ಸಾವಿರ ರೂ. ಪಾವತಿಸಬೇಕು. ಮುಂದಿನ ಒಂದು ವಾರದೊಳಗೆ ಈ ಹಣ ಪಾವತಿಸಿ, ಅದರ ಬಳಿಕ ಪ್ರತಿ ತಿಂಗಳೂ ಹಣ ಪಾವತಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಪ್ರಕರಣದ ಮುಂದಿನ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ. ಈ ಮೂಲಕ ಕೃಷ್ಣ ಜೆ. ರಾವ್ ಗೆ ಷರತ್ತುಬದ್ಧ ತಡೆಯಾಜ್ಞೆ ನೀಡಿದೆ.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಹೈಕೋರ್ಟ್, ಆರೋಪಿ ಕೃಷ್ಣ ಜೆ.ರಾವ್ ನಿಂದಲೇ ಸಂತ್ರಸ್ತೆಗೆ ಮಗುವಾಗಿರುವುದರಿಂದ ಸಂತ್ರಸ್ತೆಯನ್ನು ವಿವಾಹವಾಗುವಂತೆ ಸೂಚಿಸಿತ್ತು. ಅಲ್ಲದೇ ಸಂತ್ರಸ್ತೆ ಹಾಗೂ ಮಗುವಿನ ಪೋಷಣೆ ನಿಟ್ಟಿನಲ್ಲಿ ಪರಿಹಾರ ನೀಡುವ ಬಗ್ಗೆಯೂ ಸೂಚಿಸಿತ್ತು. ವಿಚಾರಣೆ ವೇಳೆ ಸಂತ್ರಸ್ತೆ ಪರ ವಕೀಲರು, ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿ ಅರ್ಜಿದಾರ ಮತ್ತು ಸಂತ್ರಸ್ತೆ ಪ್ರೀತಿಸುತ್ತಿದ್ದರು. ಬಳಿಕ ಮದುವೆಯಾಗುವುದಾಗಿ ನಂಬಿಸಿ ನೀಡಿ ಹಲವು ಬಾರಿ ಅತ್ಯಾಚಾರವೆಸಗಿದ್ದು, ಇದರಿಂದ ಸಂತ್ರಸ್ತೆ ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನು ಎರಡು ತಿಂಗಳು ಕಳೆದರೆ ಮಗುವಿಗೆ ಒಂದು ವರ್ಷ ಆಗಲಿದೆ. ಶ್ರೀ ಕೃಷ್ಣ ಎಂಬುದಾಗಿ ಮಗುವಿಗೆ ಹೆಸರಿಡುವುದಾಗಿ ತಿಳಿಸಿದ್ದಾರೆ. ಆದರೆ, ಈವರೆಗೂ ಆ ಕಾರ್ಯಕ್ಕೆ ಮುಂದಾಗಿಲ್ಲ. ಮಗುವನ್ನು ನೋಡಲು ಆರೋಪಿಯ ಕುಟುಂಬಸ್ಥರು ಬಂದಿಲ್ಲ. ಸಂತ್ರಸ್ತೆಯ ತಾಯಿ ಮನೆ ಕೆಲಸ ಮಾಡುತ್ತಾರೆ. ತಂದೆ ಚಿನ್ನಾಭರಣ ಅಂಗಡಿಯಲ್ಲಿ ದಿನಗೂಲಿ ನೌಕರರಾಗಿದ್ದು, ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ವಾದ ಮಂಡಿಸಿದ್ದರು.

