ಬೀದರ್: ರಾಜ್ಯದ ಕರಾವಳಿ ಜಿಲ್ಲೆಗಳು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ರಣ ಬಿಸಿಲ ಝಳದಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಬೀದರ್ ನಲ್ಲಿ ಸುರಿದ ಧಾರಾಕಾರ ಮಳೆ, ಸಿಡಿಲಿಗೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಿ ಗ್ರಾಮದಲ್ಲಿ ಸಿಡಿಲು ಬಡಿದು ಇನ್ನರು ಮೃತಪಟ್ಟಿದ್ದಾರೆ. ಹಣಮಂತ ಕೋಳಿ(28) ಹಾಗೂ ಯಲ್ಲಾಲಿಂಗ (28) ಮೃತ ದುರ್ದೈವಿಗಳು. ನಿನ್ನೆ ಸಂಜೆ ಹೊಲಕ್ಕೆ ಹೋಗಿದ್ದಾಗ ಇದ್ದಕ್ಕಿದ್ದಂತೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಶುರುವಾಗಿದೆ.
ಗುಡುಗು ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಇಬ್ಬರೂ ಮಾವಿನ ಮರದ ಕೆಳಗೆ ನಿಂತಿದ್ದರು. ಮಾವಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನ ಅಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

