ನಿನ್ನೆ ( ಏಪ್ರಿಲ್ 16 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 24ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಬೌಲಿಂಗ್ ಆರಿಸಿಕೊಂಡು, ಮುಂಬೈ ಇಂಡಿಯನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿ ಕಾಕ್ ಅಬ್ಬರದ ಶತಕದ ನೆರವಿನಿಂದ 20 ಓರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 196 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಐಯ್ಯರ್ ಅಬ್ಬರದ ಜತೆಯಾಟದ ನೆರವಿನಿಂದ 16.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ದಾಖಲಿಸಿತು.
ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಪಂಜಾಬ್ ನಾಯಕ ಶ್ರೇಯಸ್ ಐಯ್ಯರ್ ಜಾಣ್ಮೆಯಿಂದ ಬೌಲರ್‌ಗಳನ್ನು ಸಹ ಬಳಸಿ ಮುಂಬೈ ಇಂಡಿಯನ್ಸ್ ಆಟಗಾರರನ್ನು ಕಾಡಿದರು. ಅಲ್ಲದೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬಾರಿಸಿದ ಸಿಕ್ಸರ್‌ನ್ನು ಬೌಂಡರಿ ಲೈನ್ ಬಳಿ ಹಾರಿ ಗಾಳಿಯಲ್ಲೇ ಚೆಂಡನ್ನು ಹಿಡಿದು ಫೀಲ್ಡ್‌ನಲ್ಲಿದ್ದ ಫೀಲ್ಡರ್ ಕೈಗೆ ಎಸೆದು ರೋಚಕ ಕ್ಯಾಚ್ ಪಡೆದು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದರು.
ಮುಂಬೈ ಇಂಡಿಯನ್ಸ್ ಡಗ್‌ಔಟ್‌ನಲ್ಲಿ ಕುಳಿತಿದ್ದ ಎಲ್ಲರೂ ಅದನ್ನು ಸಿಕ್ಸರ್ ಎಂದೇ ಭಾವಿಸಿದ್ದರು. ಆದರೆ ಶ್ರೇಯಸ್ ಐಯ್ಯರ್ ಕ್ಯಾಚ್ ಪಡೆಯುತ್ತಿದ್ದಂತೆ ಅಲ್ಲೇ ಇದ್ದ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಬಾಯಿಬಿಟ್ಟು ಕ್ಯಾಚ್ ವೀಕ್ಷಿಸುತ್ತಾ ಕುಳಿತರು.

