ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸರ್ಕಾರಿ ಸಭೆ ಕಾರ್ಯಕ್ರಮಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸಲು ಆರೋಗ್ಯ ಇಲಾಖೆ ಸಲಹಾ ಸೂಚಿ ಪ್ರಕಟಿಸಿದೆ.
ಸಿರಿಧಾನ್ಯ ಆಧಾರಿತ ಆಹಾರ, ಹಣ್ಣು, ತರಕಾರಿ ಸಲಾಡ್ ಪೂರೈಸಬೇಕು. ಸಂಸ್ಕರಿತ ಆಹಾರ, ಕರಿದ ಪದಾರ್ಥಗಳನ್ನು ನೀಡಬಾರದು ಎಂದು ಹೇಳಿದೆ. ಸಭೆ ಸಮಾರಂಭಗಳ ಜೊತೆಗೆ ಸರ್ಕಾರಿ ಕಚೇರಿಗಳಲ್ಲಿರುವ ಕ್ಯಾಂಟೀನ್ ಮತ್ತು ಖಾನಾವಳಿಗಳಿಗೂ ಮಾರ್ಗ ಸೂಚಿ ನೀಡಲಾಗಿದೆ. ಜನರ ಆರೋಗ್ಯ ದೃಷ್ಟಿಯಿಂದ ಈ ನಿಯಮ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಒಳ ಸಭಾಂಗಣದಲ್ಲಿ ನಡೆಯುವ ಸಭೆ ವಿರಾಮದ ವೇಳೆ ನೀಡುವ ಆಹಾರದಲ್ಲಿ ಸಿರಿಧಾನ್ಯಗಳು ಇರುವ ಲಘು ಉಪಹಾರ ನೀಡಬೇಕು. ಕತ್ತರಿಸಿದ ತಾಜಾ ಹಣ್ಣು ಹಾಗೂ ತರಕಾರಿಯಿಂದ ಸಿದ್ಧಪಡಿಸಿದ ಸಲಾಡ್ ಅಥವಾ ಮೊಳಕೆ ಕಟ್ಟಿದ ಕಾಳುಗಳನ್ನು ನೀಡಬೇಕು, ಬೇಯಿಸಿದ ಹುರುಳಿಕಾಳು, ಬಟಾಣಿ, ಮೆಕ್ಕೆಜೋಳ, ಉಪ್ಪು ರಹಿತ ಹುರಿದ ಬೀಜ ಧಾನ್ಯಗಳಾದ ಬಾದಾಮ್, ಶೇಂಗಾ, ಕುಂಬಳಕಾಯಿ, ಸೂರ್ಯಕಾಂತಿ, ಕುಸುಬೆ ಮುಂತಾದ ಹುರಿದ ಬೀಜಗಳನ್ನು ನೀಡಬಹುದು. ಕಡಿಮೆ ಕೊಬ್ಬಿನಾಂಶ ಇರುವ, ಕಡಿಮೆ ಸಕ್ಕರೆ ಇರುವ ಲಘು ಪಾನಿಯಗಳು, ಹಸಿರು ಚಹಾ, ಮಜ್ಜಿಗೆ ನೀಡಬಹುದು ಎಂದು ಹೇಳಲಾಗಿದೆ.
ಸಿರಿಧಾನ್ಯವುಳ್ಳ ಪದಾರ್ಥಗಳನ್ನು ಸೇರಿಸುವುದು ಕಡ್ಡಾಯ. ಚೆನ್ನಾಗಿ ಬೆಳೆಸಿದ ಮಾಂಸ ಬಳಕೆ, ಬಿಳಿ ಅಕ್ಕಿಯ ಬದಲು ಬ್ರೌನ್ ರೈಸ್ ನೀಡಬೇಕು ಎಂದು ಹೇಳಲಾಗಿದೆ. ಸಿರಿಧಾನ್ಯವುಳ್ಳ ಲಘು ಉಪಾಹಾರ, ಕಡಿಮೆ ಎಣ್ಣೆ, ಕಡಿಮೆ ಸಕ್ಕರೆ ಹೆಚ್ಚು ನಾರು ಹೊಂದಿದ ಆಹಾರ, ಅಜಿನೊಮೋಟೊ ಬಳಸದ ಲಘು ಉಪಹಾರ, ಕತ್ತರಿಸಿದ ತಾಜಾ ಹಣ್ಣು, ತರಕಾರಿ ಸಲಾಡ್, ಕಡಿಮೆ ಕೊಬ್ಬಿನಾಂಶ, ಕಡಿಮೆ ಸಕ್ಕರೆಯ ಲಘು ಪಾನೀಯ ಹುರಿದ ಬೀಜ ವಿತರಿಸಬಹುದು.
ಮೈಕ್ರೋವೇವ್ ನಲ್ಲಿ ತಯಾರಿಸಿದ ಬಿಸಿ ಮಾಡಿರುವ ಆಹಾರ, ಕೈಗಾರಿಕೆಗಳಲ್ಲಿ ಸಂಸ್ಕರಿಸಿದ ಆಹಾರ, ಹೆಚ್ಚು ಕೊಬ್ಬು, ಎಣ್ಣೆ, ಮಸಾಲೆ ಪದಾರ್ಥ, ಕರಿದ ತಿಂಡಿ ಕಾರ್ಬೋನೇಟೆಡ್ ಪಾನೀಯ, ಅಧಿಕ ಸಕ್ಕರೆ ಸೇರಿಸಿದ ಹಣ್ಣಿನ ರಸ, ಆಲ್ಕೋಹಾಲ್ ಆಧರಿತ ಪಾನೀಯ, ಪ್ಲಾಸ್ಟಿಕ್ ಬಾಟಲಿಯಲ್ಲಿನ ನೀರು ನಿಷೇಧಿಸಲಾಗಿದೆ.
ಚಿತ್ರಕೃಪೆ: ಎಐ

