ದಾವಣಗೆರೆ: ದಾವಣಗೆರೆಯ ಹರಿಹರ ಪಂಚಮಸಾಲಿ ಪೀಠದ ಮುಂದೆ ಭಕ್ತರು ಲೆಕ್ಕ ಕೊಡಿ ಅಭಿಯಾನ ಆರಂಭವಿಸಿದ್ದು, ಧರ್ಮದರ್ಶಿ ಮಂಡಳಿ ಅಹಗೂ ಭಕ್ತರ ನಡುವೆ ಸಂಘರ್ಷ ತೀವ್ರಗೊಂಡಿದೆ.
ಹರಿಹರ ಪಂಚಮಸಾಲಿ ಪೀಠದ ಬಳಿ ಜಮಾವಣೆಗೊಂಡ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಲೆಕ್ಕ ಕೊಡಿ ಎಂದು ಘೋಷನೆ ಕೂಗಿದ್ದಾರೆ. ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷ ಮಠದ ಆವರಣದಲ್ಲಿ ಹೈಡ್ರಾಮಾ ಸೃಷ್ಟಿಸಿದೆ. ಹೀಗಾಗಿ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪಂಚಮಸಾಲಿ ಪೀಠದ ಆಡಳಿತ ಮತ್ತು ನಡೆಯ ಬಗ್ಗೆ ಲೆಕ್ಕಪತ್ರ ನೀಡುವಂತೆ ಭಕ್ತರು ಆಗ್ರಹಿಸಿದ್ದಾರೆ. ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ, ಅರುಣಕಮಾರ್, ಹೂವಿನ ಹಡಗಲಿಯ ಹಾಲಪ್ಪ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಪೀಠದ ಆಡಳಿತದಲ್ಲಿ ಪಾರದರ್ಶಕತೆಯ ಕೊರತೆಯಿದೆ ಎಂದು ಆರೋಪಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ತಹಶೀಲ್ದಾರ್ ಸಂತೋಷ್ ಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭಕ್ತರನ್ನು ಮಠದ ಗೇಟ್ ಬಳಿಯೇ ತಡೆದಿದ್ದಾರೆ. ಅಲ್ಲದೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

