ವಿಜಯಪುರ : ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಈಜಲು ಹೋದ ಬೆಂಗಳೂರು ಮೂಲದ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಬೆಂಗಳೂರಿನ ಆರ್.ಟಿ. ನಗರದಿಂದ ಪ್ರವಾಸಕ್ಕೆ ಬಂದಿದ್ದ 14 ಜನರ ತಂಡದಲ್ಲಿ ಈ ಮೂವರು ಸೇರಿದ್ದರು.
ಮೃತರ ವಿವರ
- ಮೊಹಮದ್ ಹಯಾತ್ (12 ವರ್ಷ)
- ಹೈದರ್ ಪಾಷಾ (32 ವರ್ಷ)
- ಅಬ್ದುಲ್ ಖದ್ದೂಸ್ (35 ವರ್ಷ)
ಘಟನೆಯ ಹಿನ್ನೆಲೆ : ಬೆಂಗಳೂರಿನ ಆರ್.ಟಿ. ನಗರದಿಂದ ಒಟ್ಟು 14 ಮಂದಿ ವಿಜಯಪುರದ ಐತಿಹಾಸಿಕ ಸ್ಥಳಗಳನ್ನು ನೋಡಲು ಪ್ರವಾಸಕ್ಕೆ ಬಂದಿದ್ದರು. ಇಂದು ಸಂಜೆ ಭೂತನಾಳ ಕೆರೆಯ ಬಳಿ ವಿಹಾರಕ್ಕೆ ತೆರಳಿದ್ದಾಗ, 12 ವರ್ಷದ ಬಾಲಕ ಮೊಹಮದ್ ಹಯಾತ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ.
ಬಾಲಕನನ್ನು ಹೇಗಾದರೂ ಮಾಡಿ ರಕ್ಷಿಸಬೇಕೆಂದು ಯುವಕರಾದ ಹೈದರ್ ಪಾಷಾ ಮತ್ತು ಅಬ್ದುಲ್ ಖದ್ದೂಸ್ ತಕ್ಷಣ ಕೆರೆಗೆ ಇಳಿದಿದ್ದಾರೆ. ಆದರೆ, ಕೆರೆಯ ಆಳ ಹೆಚ್ಚಾಗಿದ್ದ ಕಾರಣ, ಬಾಲಕನೊಂದಿಗೆ ರಕ್ಷಿಸಲು ಹೋದ ಇಬ್ಬರು ಯುವಕರು ಕೂಡ ನೀರಿನ ಸೆಳವಿಗೆ ಸಿಲುಕಿ ಮುಳುಗಿದ್ದಾರೆ.
ಆಸ್ಪತ್ರೆಗೆ ಸಾಗಿಸುವಾಗ ಸಾವು: ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮೂವರನ್ನು ನೀರಿನಿಂದ ಹೊರತೆಗೆದಿದ್ದಾರೆ. ಇವರಲ್ಲಿ ಅಬ್ದುಲ್ ಖದ್ದೂಸ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರೆ, ಬಾಲಕ ಹಯಾತ್ ಮತ್ತು ಹೈದರ್ ಪಾಷಾ ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಕುಟುಂಬದಲ್ಲಿ ಆಕ್ರಂದನ: ಸಂತೋಷದಿಂದ ಪ್ರವಾಸಕ್ಕೆಂದು ಬಂದಿದ್ದ ಗುಂಪಿನಲ್ಲಿ ಮೂವರು ಸಾವನ್ನಪ್ಪಿರುವುದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತೆ ಮಾಡಿದೆ. ವಿಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.

