ಉಡುಪಿ: ಪರೀಕ್ಷಾ ಹಾಲ್ ನಲ್ಲಿಯೇ ಮೊಬೈಲ್ ನಿಂದ ಪ್ರಶ್ನೆಪತ್ರಿಕೆ ಫೋಟೋ ತೆಗೆದು ವಾಟ್ಸಾಪ್ ಮೂಲಕ ರವಾನಿಸುತ್ತಿದ್ದ ವಿದ್ಯಾರ್ಥಿಯ ವಿರುದ್ಧ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ವಿದ್ಯಾರ್ಥಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಉತ್ತರಾಖಂಡದ ಅರೀದ್ ಮಾನ್ ಸಿಂಗ್ ಅಕ್ರಮ ಎಸಗಿದ ವಿದ್ಯಾರ್ಥಿ. ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನಡೆಸುವ ಜೆಇಇ ಮೈನ್ಸ್ ಪರೀಕ್ಷೆ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಅವಧಿಯಲ್ಲಿ ನಡೆದಿತ್ತು.
ಬೆಳಿಗ್ಗೆ 149, ಮಧ್ಯಾಹ್ನ 133 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮಧ್ಯಾಹ್ನ 3 ಗಂಟೆಗೆ ಪರೀಕ್ಷೆ ಆರಂಭವಾಗಿದ್ದು, ವಿಳಾಸದ ಮಾಹಿತಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಅಥವಾ ಪರೀಕ್ಷೆಯ ಹಾಲ್ ಟಿಕೆಟ್ ಮಾತ್ರ ಪರೀಕ್ಷಾ ಕೇಂದ್ರದ ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿದ್ದು, ಅರೀದ್ ಮಾನ್ ಸಿಂಗ್ ಪರೀಕ್ಷಾ ಕೇಂದ್ರದ ಭದ್ರತಾ ಸಿಬ್ಬಂದಿ ಸೇರಿ ಎಲ್ಲರ ಕಣ್ಣು ತಪ್ಪಿಸಿ ಮೊಬೈಲ್ ತೆಗೆದುಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾನೆ. ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಅದನ್ನು ವಾಟ್ಸಾಪ್ ಮೂಲಕ ರವಾನಿಸುತ್ತಿದ್ದ ಎಂದು ಪರೀಕ್ಷಾ ಮೇಲ್ವಿಚಾರಕರು ದೂರು ನೀಡಿದ್ದು, ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರಕೃಪೆ: ಎಐ

