ಮೀರತ್(ಉತ್ತರ ಪ್ರದೇಶ): ಮೀರತ್ ನಲ್ಲಿ ನಿವೃತ್ತ ನ್ಯಾಯಾಧೀಶರು ವಿಚ್ಛೇದನ ಪಡೆದು ಮನೆಗೆ ಬಂದ ಮಗಳನ್ನು ಡ್ರಮ್ಸ್, ಹೂಮಾಲೆಗಳೊಂದಿಗೆ ಮನೆಗೆ ಸ್ವಾಗತಿಸಿದ್ದಾರೆ.
ಸಾಂಪ್ರದಾಯಿಕ ಸಾಮಾಜಿಕ ಮನೋಭಾವಗಳಿಂದ ಭಿನ್ನವಾಗಿ ಉತ್ತರ ಪ್ರದೇಶದ ಮೀರತ್ ನ ಈ ಕುಟುಂಬವು ಮೌನದಿಂದಲ್ಲ, ಬದಲಾಗಿ ಸಂಭ್ರಮದಿಂದ ವಿಚ್ಛೇದನವನ್ನು ಆಚರಿಸಿ ಗಮನಸೆಳೆದಿದೆ.
ಶನಿವಾರ ಕೌಟುಂಬಿಕ ನ್ಯಾಯಾಲಯವು ತನ್ನ ಏಕೈಕ ಪುತ್ರಿ ಪ್ರಣಿತಾ ವಶಿಷ್ಠಾ ಅವರಿಗೆ ವಿಚ್ಛೇದನ ನೀಡಿದ ನಂತರ, ನಿವೃತ್ತ ನ್ಯಾಯಾಧೀಶ ಜ್ಞಾನೇಂದ್ರ ಕುಮಾರ್ ಶರ್ಮಾ ಅವರು ಡ್ರಮ್ಸ್, ಹೂಮಾಲೆ ಮತ್ತು ಸಿಹಿತಿಂಡಿಗಳೊಂದಿಗೆ ಮನೆಗೆ ಸ್ವಾಗತಿಸಿದರು
ಅವರ ವಕೀಲರಾದ ರಾಜೀವ್ ಗಿರಿ ಮತ್ತು ನಸೀಬ್ ಸೈಫಿ ಅವರ ಪ್ರಕಾರ, ಪ್ರಣಿತಾ ಡಿಸೆಂಬರ್ 19, 2018 ರಂದು ಶಹಜಹಾನ್‌ಪುರದ ಸೇನಾ ಮೇಜರ್ ಅವರನ್ನು ವಿವಾಹವಾದರು. ಅವರ ಪತಿ ಮನೆಯಲ್ಲಿ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ತೊಂದರೆ ಕಾರಣಕ್ಕೆ ವಿವಾಹ ಸಂಬಂಧದಲ್ಲಿ ಬಿರುಕು ಮೂಡಿದೆ. ಮಗ ಜನಿಸಿದ ಹೊರತಾಗಿಯೂ, ಪರಿಸ್ಥಿತಿ ಸುಧಾರಿಸಲಿಲ್ಲ, ಪ್ರಣಿತಾ ಮೀರತ್ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಪ್ರಧಾನ ನ್ಯಾಯಾಧೀಶ ಶಕ್ತಿಪುತ್ರ ತೋಮರ್ ಶನಿವಾರ ವಿಚ್ಛೇದನವನ್ನು ಮಂಜೂರು ಮಾಡಿದರು.
ನ್ಯಾಯಾಲಯದ ತೀರ್ಪಿನ ನಂತರ, ಕುಟುಂಬವು ಆ ಕ್ಷಣವನ್ನು “ಹೊಸ ಆರಂಭ”ದ ಆಚರಣೆಯನ್ನಾಗಿ ಪರಿವರ್ತಿಸಿತು.
ಪ್ರಣೀತಾ ನ್ಯಾಯಾಲಯದ ಆವರಣದಿಂದ ಹೊರಬರುತ್ತಿದ್ದಂತೆ, ಸಂಬಂಧಿಕರು ಡ್ರಮ್ ಗಳ ತಾಳಕ್ಕೆ ನೃತ್ಯ ಮಾಡಿ ಹಬ್ಬದ ರೀತಿ ಮೆರವಣಿಗೆಯಲ್ಲಿ ಅವರನ್ನು ಮನೆಗೆ ಕರೆದೊಯ್ದರು.
ಮನೆಯಲ್ಲಿ, ಡಾ. ಶರ್ಮಾ ತಮ್ಮ ಮಗಳನ್ನು ಹಾರಗಳೊಂದಿಗೆ ಸ್ವಾಗತಿಸಿದರು ಮತ್ತು ಸಿಹಿತಿಂಡಿಗಳನ್ನು ವಿತರಿಸಿದರು. ಕುಟುಂಬ ಸದಸ್ಯರು “ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ” ಎಂಬ ಸಂದೇಶವನ್ನು ಹೊಂದಿರುವ ಕಪ್ಪು ಟಿ-ಶರ್ಟ್‌ಗಳನ್ನು ಧರಿಸಿದ್ದರು.
ನನ್ನ ಮಗಳು ಮದುವೆಯಲ್ಲಿ ಸಂತೋಷವಾಗಿಲ್ಲದಿದ್ದರೆ, ಆ ವಾತಾವರಣದಿಂದ ಅವಳನ್ನು ಹೊರಗೆ ತರುವುದು ನನ್ನ ಕರ್ತವ್ಯ. ನಾವು ಜೀವನಾಂಶ ಅಥವಾ ಬೇರೇನನ್ನೂ ಬಯಸಲಿಲ್ಲ. ನಾನು ನನ್ನ ಮಗಳನ್ನು ಮರಳಿ ಕರೆತಂದೆ. ಹೆಣ್ಣುಮಕ್ಕಳ ಸಂತೋಷ ಮತ್ತು ಘನತೆಯು ಸಾಮಾಜಿಕ ನಿರೀಕ್ಷೆಗಳಿಗಿಂತ ಆದ್ಯತೆ ನೀಡಬೇಕು ಎಂದು ಡಾ. ಶರ್ಮಾ ತಿಳಿಸಿದ್ದಾರೆ.
ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆಯಾದ ಪ್ರಣೀತಾ, ತೇಜ್ ಗಢಿಯಲ್ಲಿರುವ ಪ್ರಣವ್ ವಶಿಷ್ಠ ನ್ಯಾಯಾಂಗ ಅಕಾಡೆಮಿಯಲ್ಲಿ ಹಣಕಾಸು ನಿರ್ದೇಶಕಿಯಾಗಿದ್ದಾರೆ. 2022ರಲ್ಲಿ ಚಂಡೀಗಢದಲ್ಲಿ ನಡೆದ ಅಪಘಾತದಲ್ಲಿ ತನ್ನ ಸಹೋದರ ಪ್ರಣವ್ ವಶಿಷ್ಠ ನಿಧನರಾದ ನಂತರ, ಅವಳು ತನ್ನ ಹೆತ್ತವರಿಗೆ ಏಕೈಕ ಪುತ್ರಿ.
ತನ್ನ ಅನುಭವವನ್ನು ನೆನಪಿಸಿಕೊಂಡ ಪ್ರಣಿತಾ, ಮದುವೆಯ ಸಮಯದಲ್ಲಿ ಮಾನಸಿಕವಾಗಿ ದುರ್ಬಲಳಾಗಿದ್ದೆ. ಆದರೆ ತನ್ನ ಜೀವನವನ್ನು ಪುನರ್ನಿರ್ಮಿಸಲು ಸಹಾಯ ಮಾಡಿದ್ದಕ್ಕಾಗಿ ತನ್ನ ಕುಟುಂಬದ ಅಚಲ ಬೆಂಬಲಕ್ಕೆ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ದೌರ್ಜನ್ಯವನ್ನು ಎದುರಿಸುತ್ತಿರುವ ಮಹಿಳೆಯರು ಮೌನವಾಗಿರಬಾರದು. ನಿಮ್ಮ ಪರವಾಗಿ ನಿಲ್ಲಿರಿ. ಮದುವೆಯ ಬಗ್ಗೆ ಯೋಚಿಸುವ ಮೊದಲು ಬಲಶಾಲಿಯಾಗಿರಿ ಮತ್ತು ಸ್ವತಂತ್ರರಾಗಿರಿ ಎಂದು ಅವರು ಹೇಳಿದರು.
ವಿಚ್ಛೇದನದ ನಂತರ ಮಹಿಳೆಯ ಘನತೆ ಮತ್ತು ಸ್ವಾತಂತ್ರ್ಯವನ್ನು ಬಯಸುವ, ಅವರಿಗೆ ಹೆಚ್ಚು ಬೆಂಬಲ ನೀಡುವ ಈ ಕುಟುಂಬದ ಈ ನಡೆ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

