ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನವನ್ನು ಇತ್ತೀಚೆಗಷ್ಟೇ ₹14,000ಕ್ಕೆ ಹೆಚ್ಚಿಸಲಾಗಿದ್ದು, ಸದ್ಯಕ್ಕೆ ಅದನ್ನು ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನಕ್ಕೆ ಸಮನಾಗಿ ಪರಿಷ್ಕರಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಪ್ರಸ್ತುತ ಉಪನ್ಯಾಸಕರಿಗೆ ಜೂನ್‌ನಿಂದ ಮಾರ್ಚ್‌ವರೆಗೆ 10 ತಿಂಗಳ ಕಾಲ ಗೌರವಧನ ನೀಡಲಾಗುತ್ತಿದೆ ಎಂದು ಅವರು ಅಧಿಕೃತ ಮಾಹಿತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಚಿವ ಮಧು ಬಂಗಾರಪ್ಪ ನೀಡಿದ ಸ್ಪಷ್ಟನೆ
ಪ್ರಸ್ತುತ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ವಾರದಲ್ಲಿ 10 ರಿಂದ 12 ಗಂಟೆ ಕಾರ್ಯಭಾರ ನೀಡಿದ್ದು, ಯಾವುದೇ ವಿಷಯದಲ್ಲಿ ಇದಕ್ಕಿಂತ ಹೆಚ್ಚಿನ ಕಾರ್ಯಭಾರವಿದ್ದಲ್ಲಿ ಇಬ್ಬರು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆಯೇ?
ಉತ್ತರ: ರಾಜ್ಯದಲ್ಲಿ ಪ್ರಸ್ತುತ ತಾತ್ಕಾಲಿಕವಾಗಿ ನೇಮಕಗೊಳ್ಳುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ರೂ. 14,000/- ಗಳ ಗೌರವಧನವನ್ನು ನೀಡಲಾಗುತ್ತಿದ್ದು, ಆಯಾ ಶೈಕ್ಷಣಿಕ ವರ್ಷದ 10 ತಿಂಗಳ ಅವಧಿಗೆ ಅಂದರೆ ಜೂನ್ ಮಾಹೆಯಿಂದ ಮಾರ್ಚ್ ಮಾಹೆಯವರೆಗೆ ಗೌರವಧನವನ್ನು ಬಿಡುಗಡೆ ಮಾಡಲಾಗುತ್ತಿದೆ.
· ಪ್ರಶ್ನೆ (ಆ): ಇದರ ಬದಲಾಗಿ ಒಬ್ಬರೇ ಉಪನ್ಯಾಸಕರಿಗೆ ಪೂರ್ಣ ಕಾರ್ಯಭಾರವನ್ನು ನೀಡಿ ಅವರಿಗೆ ನೀಡುತ್ತಿರುವ ವೇತನವನ್ನು ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ನೀಡುತ್ತಿರುವಂತೆ ಪರಿಷ್ಕರಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ?
· ಉತ್ತರ: ಸರ್ಕಾರದ ಆದೇಶ ಸಂಖ್ಯೆ: ಇಪಿ 137 ಎಸ್ ಇಎಸ್ 2025, ದಿನಾಂಕ: 15-05-2025 ರಲ್ಲಿ ರೂ. 12,000/- ಗಳ ಗೌರವ ಸಂಭಾವನೆಯನ್ನು ರೂ. 14,000/- ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ.


