ಮುಂಬೈ : ಪ್ರಖ್ಯಾತ ಚಿತ್ರಕಲಾವಿದ ರಾಜಾ ರವಿವರ್ಮ ಅವರು ಬಿಡಿಸಿದ ‘ಯಶೋದಾ ಕೃಷ್ಣ’ ಎಂಬ ಚಿತ್ರವು (Oil Painting) ಬರೋಬ್ಬರಿ 167.2 ಕೋಟಿ ರೂಪಾಯಿಗೆ ಹರಾಜಾಗುವ ಮೂಲಕ ಭಾರತೀಯ ಕಲಾಕೃತಿಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸ್ಥಾಪಕ ಮತ್ತು ಬಿಲಿಯನೇರ್ ಸೈರಸ್ ಪೂನಾವಾಲಾ ಅವರು ಈ ಅಮೂಲ್ಯ ಚಿತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ.ಮುಂಬೈನಲ್ಲಿ ಬುಧವಾರ ನಡೆದ ‘ಸಾಫ್ರಾನ್ ಆರ್ಟ್’ (Saffron Art) ಸ್ಪ್ರಿಂಗ್ ಲೈವ್ ಹರಾಜಿನಲ್ಲಿ ಈ ಚಿತ್ರವು ಮಾರಾಟವಾಗಿದೆ.
ಹಳೆಯ ದಾಖಲೆ ಮುರಿತ: ಕಳೆದ ವರ್ಷ ಎಂ.ಎಫ್. ಹುಸೇನ್ ಅವರ ‘ಅನ್‌ಟೈಟಲ್ಡ್’ ಚಿತ್ರವು 118 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಈಗ ರವಿವರ್ಮ ಅವರ ಚಿತ್ರವು ಆ ದಾಖಲೆಯನ್ನು ಹಿಂದಿಕ್ಕಿದೆ.1890ರ ದಶಕದಲ್ಲಿ ರಾಜಾ ರವಿವರ್ಮ ಅವರು ಈ ಚಿತ್ರವನ್ನು ಬಿಡಿಸಿದ್ದರು. ಇದರಲ್ಲಿ ತಾಯಿ ಯಶೋದೆಯು ಹಸು ಹಾಲು ಕರೆಯುತ್ತಿರುವಾಗ, ಬಾಲಕೃಷ್ಣನು ಹಿಂದಿನಿಂದ ಬಂದು ಹಾಲಿಗಾಗಿ ಕೈ ಚಾಚುತ್ತಿರುವ ದೃಶ್ಯವು ಅತ್ಯಂತ ನೈಜವಾಗಿ ಮೂಡಿಬಂದಿದೆ.
ಸೈರಸ್ ಪೂನಾವಾಲಾ ಪ್ರತಿಕ್ರಿಯೆ: “ಈ ಚಿತ್ರವನ್ನು ಖರೀದಿಸಿರುವುದು ಒಂದು ಗೌರವ ಮತ್ತು ಜವಾಬ್ದಾರಿ ಎಂದು ಭಾವಿಸುತ್ತೇನೆ. ಇದೊಂದು ರಾಷ್ಟ್ರೀಯ ಸಂಪತ್ತು, ಇದನ್ನು ಜನರು ವೀಕ್ಷಿಸಲು ಲಭ್ಯವಾಗುವಂತೆ ಮಾಡಲು ಶ್ರಮಿಸುತ್ತೇನೆ,” ಎಂದು ಅವರು ಹೇಳಿದ್ದಾರೆ. ಮೊದಲು ಈ ಚಿತ್ರವು 80 ರಿಂದ 120 ಕೋಟಿ ರೂಪಾಯಿ ಬೆಲೆ ಬಾಳಬಹುದು ಎಂದು ಅಂದಾಜಿಸಲಾಗಿತ್ತು, ಆದರೆ ನಿರೀಕ್ಷೆಗಿಂತ ಹೆಚ್ಚಿನ ದರಕ್ಕೆ ಹರಾಜಾಗಿರುವುದು ವಿಶೇಷ.

