ಆಂಧ್ರಪ್ರದೇಶ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪೊಂದನ್ನು ನೀಡಿದ್ದು, ಹಿಂದೂ ಮಹಿಳೆಯೊಬ್ಬಳು ತನ್ನ ಪೋಷಕರಿಂದ ಉತ್ತರಾಧಿಕಾರವಾಗಿ ಪಡೆದ ಆಸ್ತಿಯು, ಅವಳು ಯಾವುದೇ ಮಕ್ಕಳಿಲ್ಲದೆ ಮೃತಪಟ್ಟರೆ ಅವಳ ತಂದೆಯ ವಾರಸುದಾರರಿಗೆ ಸೇರುತ್ತದೆಯೇ ಹೊರತು, ಅವಳ ಪತಿಗೆ ಅಥವಾ ಪತಿಯ ವಾರಸುದಾರರಿಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಲಯದ ಪ್ರಮುಖ ಅವಲೋಕನಗಳು
ಸೆಕ್ಷನ್ 15(2)(a) ಬಳಕೆ: ನ್ಯಾಯಮೂರ್ತಿ ತರ್ಲಾಡ ರಾಜಶೇಖರ್ ರಾವ್ ಅವರು ಹಿಂದೂ ಉತ್ತರಾಧಿಕಾರ ಕಾಯ್ದೆ 1956ರ ಸೆಕ್ಷನ್ 15(2)(a) ಅನ್ನು ಉಲ್ಲೇಖಿಸಿ, “ಒಬ್ಬ ಹಿಂದೂ ಮಹಿಳೆ ತನ್ನ ತಂದೆ ಅಥವಾ ತಾಯಿಯಿಂದ ಆಸ್ತಿಯನ್ನು ಪಡೆದಿದ್ದು, ಅವಳಿಗೆ ಮಕ್ಕಳಿಲ್ಲದಿದ್ದರೆ, ಅವಳ ಮರಣದ ನಂತರ ಆ ಆಸ್ತಿಯು ತಂದೆಯ ಕಾನೂನುಬದ್ಧ ವಾರಸುದಾರರಿಗೆ ಹೋಗುತ್ತದೆ. ಈ ಆಸ್ತಿಯ ಮೇಲೆ ಪತಿಗೆ ಯಾವುದೇ ಹಕ್ಕು ಇರುವುದಿಲ್ಲ” ಎಂದು ತೀರ್ಪು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
ಒಬ್ಬ ವೃದ್ಧೆ ತನ್ನ ಇಬ್ಬರು ಮೊಮ್ಮಕ್ಕಳ ಪೈಕಿ ಮೊದಲ ಮೊಮ್ಮಗಳಿಗೆ 2002 ರಲ್ಲಿ ಆಸ್ತಿಯನ್ನು ಉಡುಗೊರೆಯಾಗಿ (Gift Deed) ನೀಡಿದ್ದರು.ಆದರೆ, 2005 ರಲ್ಲಿ ಆ ಮೊದಲ ಮೊಮ್ಮಗಳು ಮಕ್ಕಳಿಲ್ಲದೆ ಮೃತಪಟ್ಟಳು.ಇದಾದ ನಂತರ, ಅಜ್ಜಿ ಮೊದಲಿನ ಉಡುಗೊರೆ ಪತ್ರವನ್ನು ರದ್ದುಗೊಳಿಸಿ, ಅದೇ ಆಸ್ತಿಯನ್ನು ತನ್ನ ಎರಡನೇ ಮೊಮ್ಮಗಳಿಗೆ (ಅರ್ಜಿದಾರರು) ವಿಲ್ ಮೂಲಕ ಬರೆದುಕೊಟ್ಟರು.
2012 ರಲ್ಲಿ ಅಜ್ಜಿ ಮೃತಪಟ್ಟ ನಂತರ, ಎರಡನೇ ಮೊಮ್ಮಗಳು ತನ್ನ ಹೆಸರಿಗೆ ಆಸ್ತಿ ವರ್ಗಾವಣೆ (Mutation) ಮಾಡುವಂತೆ ಕೋರಿದರು.
ಕಾನೂನು ಹೋರಾಟ
ಮೊದಲ ಮೊಮ್ಮಗಳ ಪತಿ (ಮೃತ ಮಹಿಳೆಯ ಪತಿ) ಇದನ್ನು ವಿರೋಧಿಸಿದರು. ಉಡುಗೊರೆ ಪತ್ರದ ರದ್ದತಿ ಅಮಾನ್ಯವೆಂದು ವಾದಿಸಿ, ಜಂಟಿ ಕಲೆಕ್ಟರ್ ಮೂಲಕ ತಮ್ಮ ಪರವಾಗಿ ಆದೇಶ ಪಡೆದಿದ್ದರು.ಇದನ್ನು ಪ್ರಶ್ನಿಸಿ ಎರಡನೇ ಮೊಮ್ಮಗಳು ಹೈಕೋರ್ಟ್ ಮೆಟ್ಟಿಲೇರಿದರು. ಅವರ ವಾದವೇನೆಂದರೆ, ತನ್ನ ಸಹೋದರಿ ಮಕ್ಕಳಿಲ್ಲದೆ ಮೃತಪಟ್ಟಿರುವುದರಿಂದ ಮತ್ತು ಆ ಆಸ್ತಿ ಅವಳ ತಂದೆಯ ಕಡೆಯಿಂದ ಬಂದಿದ್ದರಿಂದ, ಕಾನೂನಿನ ಪ್ರಕಾರ ಪತಿಗೆ ಯಾವುದೇ ಹಕ್ಕಿಲ್ಲ ಎಂಬುದು.
ನ್ಯಾಯಾಲಯದ ತೀರ್ಪು
ಹೈಕೋರ್ಟ್ ಅರ್ಜಿದಾರರ ವಾದವನ್ನು ಪುರಸ್ಕರಿಸಿತು. ಮೃತ ಪತ್ನಿಯು ತನ್ನ ತಂದೆಯ ಕಡೆಯಿಂದ ಪಡೆದ ಆಸ್ತಿಯಲ್ಲಿ ಪತಿಗೆ ಯಾವುದೇ ಹಕ್ಕು ಸಿಗುವುದಿಲ್ಲ ಎಂಬ ಕಾನೂನನ್ನು ಎತ್ತಿ ಹಿಡಿಯಿತು. ಜಂಟಿ ಕಲೆಕ್ಟರ್ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ ನ್ಯಾಯಾಲಯ, ಅರ್ಜಿದಾರರ (ಎರಡನೇ ಮೊಮ್ಮಗಳ) ಹೆಸರಿಗೆ ಕಂದಾಯ ದಾಖಲೆಗಳಲ್ಲಿ ಆಸ್ತಿ ವರ್ಗಾವಣೆ ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿತು.

