ಬೆಂಗಳೂರು: ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕೆ.ಶಂಭುಲಿಂಗ ಅವರ ತುರ್ತು ಚಿಕಿತ್ಸೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವಿನ ಹಸ್ತ ಚಾಚಿದ್ದಾರೆ.
ಪತ್ರಿಕಾ ವಿತರಕರ ಸಂಘಟನೆಗಾಗಿ ಅವಿರತವಾಗಿ ದುಡಿದ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಈಗಾಗಲೇ 16ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದ್ದು, ಇನ್ನೂ 20 ಲಕ್ಷ ಅಗತ್ಯವಿದೆ. ಈ ಸಂಕಷ್ಟದ ಹೊತ್ತಿನಲ್ಲಿ ಚಿಕಿತ್ಸಾ ವೆಚ್ಚಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯುಕ್ತಿಕವಾಗಿ 5ಲಕ್ಷ ರೂ ನೆರವು ನೀಡಿದ್ದು, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಆಸ್ಪತ್ರೆಗೆ ತಲುಪಿಸಿದ್ದಾರೆ.
ಮನವಿಗೆ ಸ್ಪಂದಿಸಿ ನೆರವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಲ್ಲ ರೀತಿಯ ಸಹಕಾರ ನೀಡಿದ ಕೆ.ವಿ.ಪ್ರಭಾಕರ್ ಅವರಿಗೆ ವಿತರಕರು ಮತ್ತು ಪತ್ರಕರ್ತರ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಧನ್ಯವಾದ ಸಲ್ಲಿಸಿದ್ದಾರೆ.

