ವಾರಣಾಸಿ: ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಪ್ರಯಾಣಿಕನೊಬ್ಬ ಎರಡು ಬಾರಿ ತೆರೆಯಲು ಯತ್ನಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಈ ಬಗ್ಗೆ ಪ್ರಯಾಣಿಕನನ್ನು ಪ್ರಶ್ನಿಸಿದಾಗ ನನ್ನ ಮೇಲೆ ದೆವ್ವ ಬಂದಿದೆ ಎಂದು ಹೇಳಿಕೆ ನೀಡಿದ್ದಾನೆ. ಉತ್ತರ ಪ್ರದೇಶದ ಮೌ ಜಿಲ್ಲೆಯ ಮೊಹಮ್ಮದ್ ಅದ್ನಾನ್ ಇಂತಹ ಕೃತ್ಯವಸಗಿದ ವ್ಯಕ್ತಿ. ವಾರಣಾಸಿಯಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮೊಹಮ್ಮದ್ ನನ್ನು ಬಂಧಿಸಲಾಗಿದೆ.
ಬೆಂಗಳೂರಿನಿಂದ ವಾರಣಾಸಿಗೆ ಶನಿವಾರ ರಾತ್ರಿ 8:15ಕ್ಕೆ ಇಂಡಿಗೋ ವಿಮಾನ ಹೊರಟಿದ್ದು 15 ನಿಮಿಷಕ್ಕೆ ಮೊಹಮ್ಮದ್ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆಯಲು ಯತ್ನಿಸಿದ್ದಾನೆ. ವಿಮಾನದ ಸಿಬ್ಬಂದಿ ಎಮರ್ಜೆನ್ಸಿ ಡೋರ್ ತೆಗೆಯದಂತೆ ಎಚ್ಚರಿಸಿದ್ದಾರೆ. ನಂತರ ರಾತ್ರಿ 10.20ಕ್ಕೆ ವಿಮಾನ ಲ್ಯಾಂಡ್ ಆಗುವ ವೇಳೆ ವಿಮಾನ ಭೂಮಿಯಿಂದ ಕೇವಲ 500 ಅಡಿ ಮೇಲಿರುವಾಗ ಮತ್ತೆ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಕೂಡಲೇ ಪೈಲಟ್ ಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಹೀಗಾಗಿ ನಂತರ ಕೆಲ ಸಮಯ ಆಕಾಶದಲ್ಲೇ ವಿಮಾನ ಸುತ್ತಿಸಿ ರಾತ್ರಿ 10.35ಕ್ಕೆ ಲ್ಯಾಂಡ್ ಮಾಡಲಾಗಿದೆ. ವಾರಣಾಸಿ ಪೊಲೀಸ್ ಅಧಿಕಾರಿಗಳು ಮೊಹಮ್ಮದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನನಗೆ ಏನೂ ಗೊತ್ತಾಗಿಲ್ಲ, ನನ್ನ ಮೇಲೆ ದೆವ್ವ ಬಂದಿತ್ತು ಎಂದು ಹೇಳಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಚಿತ್ರಕೃಪೆ: ಎಐ

