ಬೆಂಗಳೂರು: ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂದು ಶಾಸಕರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೂಚನೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಗೆಲುವಿಗೆ ಎಲ್ಲರೂ ಶ್ರಮಿಸಬೇಕು. ಎಲ್ಲರೂ 10 ದಿನ ಕಡ್ಡಾಯವಾಗಿ ಕ್ಷೇತ್ರಗಳಲ್ಲಿ ಇದ್ದು ಕೆಲಸ ಮಾಡಬೇಕು. ಸಮುದಾಯವಾರು ನಾಯಕರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ಯಾರಿಗೆ ಜವಾಬ್ದಾರಿ ಹಂಚುತ್ತೇವೆಯೋ ಅವರೆಲ್ಲರೂ ಕೆಲಸ ಮಾಡಬೇಕು. ಸಚಿವರು, ಶಾಸಕರು, ಮುಖಂಡರು ಎಷ್ಟು ಸಾಧ್ಯವೋ ಅಷ್ಟು ಮತಗಳನ್ನು ಕನ್ವರ್ಟ್ ಮಾಡಬೇಕು. ಆಯಾ ಸಮುದಾಯದ ಮತ ಬ್ಯಾಂಕ್ ಪಡೆಯಲು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಸಚಿವರು, ಶಾಸಕರು ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡುತ್ತೇವೆ. ಗ್ರಾಮ ಪಂಚಾಯಿತಿಗೆ ಒಬ್ಬ ಶಾಸಕರನ್ನು ನೇಮಿಸಲಾಗುವುದು. ಉಪಚುನಾವಣೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಶಾಮನೂರು ಶಿವಶಂಕರಪ್ಪ ಮತ್ತು ಹೆಚ್.ವೈ. ಮೇಟಿ ನಿಧನದಿಂದ ತೆರವಾದ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ರೂಪಿಸಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರ ಕೈಗೊಳ್ಳಲಿದ್ದಾರೆ.

