ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಹಾಜರಾಗುವ ವಕೀಲರಿಗೆ ಕಪ್ಪು ಕೋಟ್ ನಿಂದ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಪ್ರತ್ಯೇಕ ಮನವಿಗಳಿಗೆ ಹೈಕೋರ್ಟ್ ಸ್ಪಂದಿಸಿದ್ದು ಈ ಕುರಿತಾಗಿ ಸೋಮವಾರ ಆದೇಶ ಹೊರಡಿಸಲಾಗಿದೆ.
ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಪ್ರಕಟಣೆ ನೀಡಿದ್ದು, ಮೇ 31ರವರೆಗೆ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಹಾಜರಾಗುವ ವಕೀಲರಿಗೆ ಕಪ್ಪು ಕೋಟ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ. ಕಪ್ಪು ಬಣ್ಣ ಬಿಸಿಲ ತಾಪವನ್ನು ಹೆಚ್ಚು ಹಿಡಿದಿಟ್ಟುಕೊಳ್ಳುತ್ತದೆ. ಹೀಗಾಗಿ ವಕೀಲರು ಬಿಳಿ ಅಂಗಿ, ಬಿಳಿ ಸಲ್ವಾರ್ ಕಮೀಜ್, ಅಥವಾ ಸೀರೆ ಧರಿಸಬಹುದು. ಜೊತೆಗೆ ಬಿಳಿ ಕುತ್ತಿಗೆ ಪಟ್ಟಿ ಧರಿಸಿರಬೇಕು ಎಂದು ತಿಳಿಸಿದ್ದಾರೆ.

