ತುಮಕೂರು: ಪೊಲೀಸ್ ಠಾಣೆಗೆ ಕರೆ ತಂದಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವ್ಯಕ್ತಿ ಸಾವಿಗೆ ಪೊಲೀಸರೇ ಕಾರಣ ಎಂದು ಪೊಲೀಸ್ ಠಾಣೆ ಒಳಗೆ ಶವ ತಂದಿಟ್ಟು ಪ್ರತಿಭಟನೆ ಮಾಡಲಾಗಿದೆ.
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಯಳನಾಡು ಗ್ರಾಮದ ಕಾಂತರಾಜು ಎಂಬಾತ ಮೃತಪಟ್ಟಿದ್ದು, ಠಾಣೆ ಬಳಿ ಜಮಾಯಿಸಿದ ಗ್ರಾಮದ ಜನ ಪ್ರತಿಭಟನೆ ನಡೆಸಿದ್ದಾರೆ.
ಜೂಜಾಟ ಪ್ರಕರಣದಲ್ಲಿ ಕಾಂತರಾಜು ಸೇರಿದಂತೆ ಆರು ಜನರನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಬಂದಿದ್ದು, ರಾತ್ರಿ 8 ಗಂಟೆವರೆಗೂ ಠಾಣೆಯಲ್ಲಿ ಇರಿಸಿದ್ದರು. ನಂತರ ಅವರನ್ನು ಹೊರ ಕಳಿಸಿದ್ದು, ಗೇಟ್ ಬಳಿ ಕಾಂತರಾಜು ಕುಸಿದುಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕಾಂತರಾಜು ಸಾವಿಗೆ ಪೊಲೀಸರೇ ಕಾರಣ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

