ಇದೇ ಮಾರ್ಚ್ 28ರಿಂದ ಚುಟುಕು ಕ್ರಿಕೆಟ್ ಸಮರ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿ ಆರಂಭಗೊಳ್ಳಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಯಾವ ತಂಡಗಳ ಬಲಾಬಲ ಹೇಗಿದೆ ಎಂಬ ಚರ್ಚೆಗಳು ಆರಂಭಗೊಂಡಿವೆ. ಇನ್ನು ಉದ್ಘಾಟನಾ ಪಂದ್ಯದಲ್ಲಿ ಚಾಂಪಿಯನ್ಸ್ ಆರ್‌ಸಿಬಿ ಎದುರು ಕಣಕ್ಕಿಳಿಯಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಬೇಕಿರುವ ನಾಯಕ ಪ್ಯಾಟ್ ಕಮಿನ್ಸ್ ಟೂರ್ನಿಗೆ ಅಲಭ್ಯರಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಅವರ ಬದಲಿಗೆ ನಾಯಕತ್ವ ನಿರ್ವಹಿಸುವವರು ಯಾರು ಎಂಬ ಪ್ರಶ್ನೆಗಳು ಎದ್ದಿವೆ.
ಕಳೆದ ವರ್ಷ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಪ್ಯಾಟ್ ಕಮಿನ್ಸ್ ಬಳಿಕ ಗಾಯದ ಸಮಸ್ಯೆಯಿಂದಾಗಿ ಹೆಚ್ಚೇನೂ ಪಂದ್ಯಗಳನ್ನಾಡಿಲ್ಲ. ಕಳೆದ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡು ಮೂರು ಟೆಸ್ಟ್ ಆಡಿದ್ದ ಕಮಿನ್ಸ್ ಪ್ರತಿಷ್ಠಿತ ಆಶಸ್ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು.
ಕ್ರಿಕ್‌ಟ್ರ್ಯಾಕರ್ ವರದಿಯ ಪ್ರಕಾರ ಈ ಜವಾಬ್ದಾರಿಯನ್ನು ತಂಡದ ಪ್ರಮುಖ ಆಟಗಾರ ಪ್ಯಾಕೆಟ್ ಡೈನಮೊ ಇಶಾನ್ ಕಿಶನ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಇಶಾನ್ ಕಿಶನ್ ಕಳೆದ ವರ್ಷ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ನಾಯಕನಾಗಿ ಮುನ್ನಡೆಸಿ ಟ್ರೋಫಿ ಗೆಲ್ಲಿಸಿದ್ದರು. 197.32 ಸ್ಟ್ರೈಕ್ ರೇಟ್ ಹಾಗೂ 57.44 ಸರಾಸರಿಯಲ್ಲಿ ಬರೋಬ್ಬರಿ 517 ರನ್ ಚಚ್ಚಿದ್ದ ಇಶಾನ್ ಕಿಶನ್ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಹರಿಯಾಣ ವಿರುದ್ಧದ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕಿಶನ್ ಟೂರ್ನಿಯಲ್ಲಿ ಒಟ್ಟು ಎರಡು ಶತಕ ಬಾರಿಸಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸಿ ಚೊಚ್ಚಲ ಟ್ರೋಫಿ ತಂದುಕೊಟ್ಟ ಇಶಾನ್ ಕಿಶನ್ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಕಣಕ್ಕಿಳಿದು ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಕಿಶನ್ ಸ್ಪೋಟಕ 54 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

