ಬೆಂಗಳೂರು: ಬೆಂಗಳೂರಿನಲ್ಲಿ ಹಫ್ತಾ ನೀಡದಿದ್ದಕ್ಕೆ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ವಿಲ್ಸನ್ ಗಾರ್ಡನ್ ನ ಬಡಾ ಮಖಾನ್ ಬಳಿ ನಡೆದಿದೆ.
ಮೂವರು ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಬ್ಯಾಟ್ ನಿಂದ ಹಲ್ಲೆ ಮಾಡಿ 45 ವರ್ಷದ ರಶೀದ್ ಪಾಷಾ ಎಂಬುವರನ್ನು ಕೊಲೆ ಮಾಡಲಾಗಿದೆ. ಬಡಾ ಮಖಾನ್ ಬಳಿ ರಶೀದ್ ಪಾಷಾ ಮೆಕಾನಿಕ್ ಶಾಪ್ ನಡೆಸುತ್ತಿದ್ದರು. ಶಾಪ್ ಮೇಲ್ಭಾಗದಲ್ಲಿ ಮೋಲ್ಡ್ ಹಾಕಲು 50 ಸಾವಿರ ಹಫ್ತಾ ಕೇಳಿದ ಆರೋಪಿಗಳು ಬೆದರಿಸಿದ್ದಾರೆ. ಹಫ್ತಾ ಕೊಡಲ್ಲ ಎಂದು ಆರೋಪಿಗಳಿಗೆ ಭಾನುವಾರ ಬೆಳಗ್ಗೆ ರಶೀದ್ ಹೇಳಿದ್ದು, ರಾತ್ರಿ 8.30ಕ್ಕೆ ಮತ್ತೆ ಬಂದು ಹಫ್ತಾ ಕೊಡುವಂತೆ ಬೆದರಿಸಿದ್ದಾರೆ. ಹಫ್ತಾ ಕೊಡದಿದ್ದಕ್ಕೆ ಹಲ್ಲೆ ಮಾಡಿ ಮೂವರು ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದ ರಶೀದ್ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

