ಗೂರ್ಖಾ: ಮನಕಾಮನಾ ದೇವಸ್ಥಾನದಿಂದ ವಾಪಸ್ ಆಗುತ್ತಿದ್ದಾಗ ಭಾರತೀಯ ಯಾತ್ರ್ಕರಿದ್ದ ಬಸ್ ರಸ್ತೆಯಿಂದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ನಡೆದಿದೆ.
ನೇಪಾಳದ ಗೂರ್ಖಾದ ಶಾಹಿದ್ ಲಖನ್ ಗ್ರಾಮೀಣ ಪುರಸಭೆ -3 ರ ಕಾಂಟಾರ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಮನಕಾಮನಾದಿಂದ ಮಜುವಾ ಕಡೆಗೆ ಬರುತ್ತಿದ್ದ ಎಲೆಕ್ಟ್ರಿಕ್ ಮೈಕ್ರೋ ಬಸ್ (ಬಾಗ್ಮತಿ ಪ್ರಾಂತ್ಯ 006 ಖಾ 8430) ರಸ್ತೆಯಿಂದ ಸುಮಾರು 200 ಮೀಟರ್ ದೂರಕ್ಕೆ ಉರುಳಿಬಿದ್ದಿದೆ. ಬಸ್ಸಿನಲ್ಲಿ 16 ಜನರು ಪ್ರಯಾಣಿಸುತ್ತಿದ್ದರು. ಏಳು ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಭಾರತೀಯರು ಎನ್ನುವ ಮಾಹಿತಿ ಲಭ್ಯವಾಗಿದೆ.
ಪೊಲೀಸರ ಪ್ರಕಾರ, 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತು ಉಳಿದ 7 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮತ್ತು ಸಹ-ಚಾಲಕನನ್ನು ಹೊರತುಪಡಿಸಿ, ಎಲ್ಲಾ ಪ್ರಯಾಣಿಕರು ಭಾರತೀಯ ನಾಗರಿಕರಾಗಿದ್ದರು.
ಪೊಲೀಸರು, ಸ್ಥಳೀಯರು ಮತ್ತು ರಕ್ಷಣಾ ತಂಡಗಳ ಸಹಾಯದಿಂದ ಗಾಯಾಳುಗಳು ಮತ್ತು ಶವಗಳನ್ನು ಹೊರತೆಗೆಯಲಾಗಿದೆ. ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.
ಮೃತರನ್ನು ಮುತ್ತುಕುಮಾರ್ (58), ಅನಾಮಾಲಿಕ್ (58), ಮೀನಾಕ್ಷಿ (59), ಶಿವಗಾಮಿ (53), ವಿಜಯಲ್ (57), ಮೀನಾ (58) ಮತ್ತು ತಮಿಳರಸಿ (60) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಎಲೆಕ್ಟ್ರಿಕ್ ಬಸ್ಸಿನ ಚಾಲಕ ಯಾವುದೇ ಹಾನಿಯಾಗದಂತೆ ಪಾರಾಗಿದ್ದು, ಅವರ ಸಹಾಯಕ ಗಾಯಗೊಂಡಿದ್ದಾರೆ.

