ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತೀಯ ಹೂಡಿಕೆದಾರರಿಗೆ ದುಬೈ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಹೂಡಿಕೆಯ ದೃಷ್ಟಿಯಿಂದ ಅಥವಾ ಎರಡನೇ ಮನೆಯಾಗಿ ದುಬೈನಲ್ಲಿ ಆಸ್ತಿ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ, ವಿದೇಶದಲ್ಲಿ ಆಸ್ತಿ ಖರೀದಿಸುವ ಮೊದಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರದ ನಿಯಮಗಳನ್ನು ತಿಳಿದುಕೊಳ್ಳುವುದು ಅತಿ ಅಗತ್ಯ. ಈ ನಿಯಮಗಳನ್ನು ಮೀರಿ ಹಣ ವರ್ಗಾವಣೆ ಮಾಡಿದರೆ ಭಾರಿ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ಹಣ ವರ್ಗಾವಣೆಗೆ ಇದೆ ಮಿತಿ: ಭಾರತೀಯ ನಿವಾಸಿಗಳು ವಿದೇಶದಲ್ಲಿ ಆಸ್ತಿ ಖರೀದಿಸಲು ಹಣ ಕಳುಹಿಸಲು ಸರ್ಕಾರ ಅವಕಾಶ ನೀಡಿದೆ. ಆದರೆ ಇದಕ್ಕೆ ಎಲ್ಆರ್‌ಎಸ್ (Liberalised Remittance Scheme) ಅಡಿಯಲ್ಲಿ ಮಿತಿ ಹೇರಲಾಗಿದೆ. ಒಬ್ಬ ವ್ಯಕ್ತಿಯು ಒಂದು ಆರ್ಥಿಕ ವರ್ಷದಲ್ಲಿ (ಏಪ್ರಿಲ್‌ನಿಂದ ಮಾರ್ಚ್‌ವರೆಗೆ) ಗರಿಷ್ಠ 2.50 ಲಕ್ಷ ಅಮೆರಿಕನ್ ಡಾಲರ್ ಅಂದರೆ ಸರಿಸುಮಾರು 2 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತವನ್ನು ಮಾತ್ರ ಕಳುಹಿಸಬಹುದು.
ಒಂದು ವೇಳೆ ನೀವು ಖರೀದಿಸುವ ಫ್ಲಾಟ್‌ನ ಬೆಲೆ ಈ ಮಿತಿಗಿಂತ ಹೆಚ್ಚಿದ್ದರೆ, ಕುಟುಂಬದ ಇತರ ಸದಸ್ಯರನ್ನು (ಪತ್ನಿ ಅಥವಾ ಮಕ್ಕಳು) ಆಸ್ತಿಯ ಜಂಟಿ ಮಾಲೀಕರನ್ನಾಗಿ ಸೇರಿಸಬಹುದು. ಆಗ ಪ್ರತಿಯೊಬ್ಬರ ಹೆಸರಿನಲ್ಲಿ ತಲಾ 2.50 ಲಕ್ಷ ಡಾಲರ್ ಮೊತ್ತವನ್ನು ಒಟ್ಟುಗೂಡಿಸಿ ವರ್ಗಾಯಿಸಲು ಅವಕಾಶವಿರುತ್ತದೆ. ಆದರೆ ನೆನಪಿರಲಿ, ಆಸ್ತಿಯ ದಾಖಲೆಗಳಲ್ಲಿ ಪ್ರತಿಯೊಬ್ಬರ ಹೆಸರು ಇರುವುದು ಕಡ್ಡಾಯ. ಕೇವಲ ವೈಯಕ್ತಿಕವಾಗಿ ಮಾತ್ರ ಈ ಸೌಲಭ್ಯವಿದ್ದು, ಕಂಪನಿ ಅಥವಾ ಟ್ರಸ್ಟ್‌ಗಳ ಮೂಲಕ ಈ ರೀತಿ ಹಣ ಕಳುಹಿಸಲು ಬರುವುದಿಲ್ಲ.
ಸಾಲ ಪಡೆಯುವಂತಿಲ್ಲ: ಅನೇಕರು ಮಾಡುವ ದೊಡ್ಡ ತಪ್ಪು ಎಂದರೆ ದುಬೈನ ಬ್ಯಾಂಕ್‌ಗಳಿಂದ ಅಥವಾ ಅಲ್ಲಿನ ಬಿಲ್ಡರ್‌ಗಳಿಂದ ಸಾಲ ಪಡೆದು ಆಸ್ತಿ ಖರೀದಿಸಲು ಮುಂದಾಗುವುದು. ಭಾರತೀಯ ವಿದೇಶಿ ವಿನಿಮಯ ಕಾನೂನಿನ (FEMA) ಪ್ರಕಾರ, ಭಾರತದಲ್ಲಿ ನೆಲೆಸಿರುವವರು ವಿದೇಶಿ ಬ್ಯಾಂಕ್‌ಗಳಿಂದ ಇಂತಹ ಉದ್ದೇಶಕ್ಕಾಗಿ ಸಾಲ ಪಡೆಯಲು ಅನುಮತಿಯಿಲ್ಲ. ಅಲ್ಲದೆ ಭಾರತದ ಬ್ಯಾಂಕ್‌ಗಳು ಕೂಡ ವಿದೇಶದಲ್ಲಿರುವ ಆಸ್ತಿಗಾಗಿ ಹೋಮ್ ಲೋನ್ ನೀಡುವುದಿಲ್ಲ. ಆದ್ದರಿಂದ ನಿಮ್ಮ ಉಳಿತಾಯದ ಹಣದ ಮೂಲಕವೇ ಆಸ್ತಿ ಖರೀದಿಸಬೇಕಾಗುತ್ತದೆ.
ತೆರಿಗೆ ಪಾವತಿ ಮತ್ತು ಮಾಹಿತಿ ನೀಡುವುದು ಕಡ್ಡಾಯ: ದುಬೈನಲ್ಲಿ ಆಸ್ತಿ ಖರೀದಿಸಿದ ನಂತರ ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಪ್ರತಿ ವರ್ಷ ಭಾರತದಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವಾಗ ವಿದೇಶದಲ್ಲಿರುವ ಆಸ್ತಿಯ ವಿವರಗಳನ್ನು ಕಡ್ಡಾಯವಾಗಿ ಘೋಷಿಸಬೇಕು. ಒಂದು ವೇಳೆ ಆ ಆಸ್ತಿಯಿಂದ ಬಾಡಿಗೆ ಬರುತ್ತಿದ್ದರೆ ಅಥವಾ ಭವಿಷ್ಯದಲ್ಲಿ ಅದನ್ನು ಮಾರಾಟ ಮಾಡಿ ಲಾಭ ಗಳಿಸಿದರೆ, ಆ ಆದಾಯದ ಬಗ್ಗೆಯೂ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು. ಮಾಹಿತಿಯನ್ನು ಮುಚ್ಚಿಟ್ಟರೆ ಭಾರಿ ಮೊತ್ತದ ದಂಡ ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ನಿಯಮ ಉಲ್ಲಂಘಿಸಿದರೆ ಏನಾಗುತ್ತೆ? ಫೆಮಾ (FEMA) ನಿಯಮಗಳನ್ನು ಉಲ್ಲಂಘಿಸುವುದು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಅಧಿಕೃತ ಬ್ಯಾಂಕ್‌ಗಳ ಮೂಲಕವೇ ವ್ಯವಹಾರ ನಡೆಸಬೇಕು ಮತ್ತು ಹಣದ ಮೂಲ ಪಾರದರ್ಶಕವಾಗಿರಬೇಕು. ಯಾವುದೋ ಶಾರ್ಟ್‌ಕಟ್ ಬಳಸಲು ಹೋಗಿ ಸಿಕ್ಕಿಬಿದ್ದರೆ ಹಣಕಾಸಿನ ದಂಡ ಮಾತ್ರವಲ್ಲದೆ ಕಾನೂನು ಸುಳಿಗೆ ಸಿಲುಕುವ ಅಪಾಯವಿರುತ್ತದೆ. ಆದ್ದರಿಂದ ವಿದೇಶದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುವ ಮೊದಲು ತಜ್ಞ ಆಡಿಟರ್‌ಗಳ ಸಲಹೆ ಪಡೆಯುವುದು ಉತ್ತಮ.

