ಬಾಗಲಕೋಟೆ: ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಹಲ್ಲೆಗೊಳಗಾಗಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಸಾವಳಗಿ ಗ್ರಾಮದ ಸುದೀಪ್ ಪಾಂಗೆ (19) ಎಂದು ಗುರುತಿಸಲಾಗಿದೆ. ಸಾವಳಗಿ ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಇರುವ ಸಾವಳಗಿ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸುದೀಪ್ ಪಾಂಗೆ ಶಾಲೆಯ ಮೇಲ್ಛಾವಣಿ ಮೇಲೆ ಕುಳಿತುಕೊಂಡು ಕೆಳಗಿದ್ದ ಕಾರ್ಯಕ್ರಮದತ್ತ ಕಲ್ಲು ಎಸೆದಿದ್ದಾನಂತೆ ಅಲ್ಲದೇ ವಿದ್ಯಾರ್ಥಿನಿಯರು ಕಾರ್ಯಕ್ರಮಕ್ಕಾಗಿ ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಕಿಡಗಿಯಿಂದ ಇಣುಕಿ ನೋಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದರಿಂದ ಸ್ಥಳೀಯರು ಯುವಕನನ್ನು ಹಿಡ್ದ್ಯು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರಾಜು ಮಾಳಿ, ವಿಜಯ್ ಸಾವಳಗಿ ಮತ್ತು ಮಲ್ಲಿಕಾರ್ಜುನ ಮಾಳಿ ಎಂಬ ಮೂವರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಸುದೀಪ್ ಪಾಂಗೆಯನ್ನು ತಕ್ಷಣ ಜಮಖಂಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ.
ಮೃತನ ಸಹೋದರ ಮೂವರ ವಿರುದ್ಧ ದೂರು ನೀಡಿದ್ದಾನೆ. ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ರಾಜು ಮಾಳಿ, ವಿಜಯ್ ಸಾವಳಗಿ ಮತ್ತು ಮಲ್ಲಿಕಾರ್ಜುನ ಮಾಳಿ ವಿರುದ್ಧ ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

