ಚಂಡೀಗಢ: ಪಂಜಾಬ್‌ನ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಅಮೃತ್ ಪಾಲ್ ಸಿಂಗ್‌ನನ್ನು ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಅಡಿಯಲ್ಲಿ ಯುರೋಪ್‌ನಲ್ಲಿ ಬಂಧಿಸಲಾಗಿದೆ.
ಜಗ್ಗು ಭಗವಾನ್‌ಪುರಿಯಾ ಗ್ಯಾಂಗ್‌ಗೆ ಸಂಬಂಧಿಸಿದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಗಳಲ್ಲಿ ಒಬ್ಬನಾದ ಅಮೃತ್ ಪಾಲ್ ಸಿಂಗ್ ಅಲಿಯಾಸ್ ಅಮೃತ್ ದಲಾಮ್ ನನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA), ಸಿಬಿಐ ಮತ್ತು ಇತರ ಕೇಂದ್ರ ಸಂಸ್ಥೆಗಳ ಸಮನ್ವಯದೊಂದಿಗೆ ಪಂಜಾಬ್ ಪೊಲೀಸರ ಕೋರಿಕೆಯ ಮೇರೆಗೆ ಹೊರಡಿಸಲಾದ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ಮೊಲ್ಡೊವಾ ಗಡಿಯಲ್ಲಿ ಬಂಧಿಸಲಾಗಿದೆ.
ವಿದೇಶಗಳಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಲು ಮತ್ತು ಪಂಜಾಬ್‌ನಲ್ಲಿ ಕಾನೂನು ಕ್ರಮ ಎದುರಿಸಲು ಅವರನ್ನು ಗಡೀಪಾರು ಮಾಡಲು ಪಂಜಾಬ್ ಪೊಲೀಸರು ಇತ್ತೀಚೆಗೆ ಐಜಿ-ಕೌಂಟರ್ ಇಂಟೆಲಿಜೆನ್ಸ್ ಆಶಿಶ್ ಚೌಧರಿ ನೇತೃತ್ವದಲ್ಲಿ ಸಾಗರೋತ್ತರ ಪ್ಯುಗಿಟಿವ್ ಟ್ರ್ಯಾಕಿಂಗ್ ಮತ್ತು ಎಕ್ಸ್‌ಟ್ರಾಡಿಷನ್ ಸೆಲ್ (OFTEC) ಅನ್ನು ಸ್ಥಾಪಿಸಿದ್ದಾರೆ.
ಬಟಾಲಾದ ದಲಾಮ್ ನಂಗಲ್ ಗ್ರಾಮದ ಮೂಲದ ಅಮೃತ್ ಪಾಲ್ ನಕಲಿ ಪಾಸ್‌ಪೋರ್ಟ್‌ನಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ. ಅಮೃತಸರ ಪ್ರದೇಶದ ಉದ್ಯಮಿಗಳಿಗೆ ಸುಲಿಗೆ ಕರೆಗಳನ್ನು ಮಾಡುತ್ತಲೇ ಇದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಂಜಾಬ್‌ನಲ್ಲಿ ಕೊಲೆ, ಕೊಲೆ ಯತ್ನ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ಹಲವಾರು ಗಂಭೀರ ಪ್ರಕರಣಗಳಲ್ಲಿ ಅಮೃತ್ ಪಾಲ್ ಬೇಕಾಗಿದ್ದ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ.

