ಬೆಳಗಾವಿಯ ರಸ್ತೆ, ರೈಲು ಮತ್ತು ವಿಮಾನಯಾನ ಯೋಜನೆಗಳ ಕುರಿತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮಹತ್ವದ ಸಭೆಯನ್ನು ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಶನ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಏರ್‌ಪೋರ್ಟ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಕುರಿತು ಚರ್ಚಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ: ಹಲಗಾ-ಮಚ್ಚೆ ನಡುವೆ ಈಗಾಗಲೇ 3-4 ಕಿ.ಮೀ.ರಸ್ತೆ ನಿರ್ಮಾಣ ಈ ಮಾಹೆಯ ಅಂತ್ಯದಲ್ಲಿ ಪೂರ್ಣಗೊಳ್ಳಲಿರುವ ಬಗ್ಗೆ ಅಧಿಕಾರಿಗಳು ತಿಳಿಸಿ, ಡಿಸೆಂಬರ್ ಅಂತ್ಯದಲ್ಲಿ ಎಲ್ಲಾ 13.33 ಕಿ.ಮೀ. ಮಾರ್ಗ ನಿರ್ಮಾಣ ಪೂರ್ಣಗೊಳಿಸುವ ಬಗ್ಗೆ ಭರವಸೆಯನ್ನು ನೀಡಿದರು.
ಅದರಂತೆ ಸರ್ವಿಸ್ ರಸ್ತೆ ನಿರ್ಮಾಣ ಎಪ್ರಿಲ್ ಅಂತ್ಯದ ಅವಧಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಅಧಿಕಾರಿಗಳು ತಿಳಿಸಿದರು. ಅದರಂತೆ ರಿಂಗ್ ರಸ್ತೆ ನಿರ್ಮಾಣದ ಪ್ರಗತಿಯ ಬಗ್ಗೆಯೂ ಸಹ ಚರ್ಚಿಸಲಾಯಿತು.
ಬೆಳಗಾವಿ-ಸಂಕೇಶ್ವರ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸುತ್ತಿರುವ 6 ಪಥದ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಅಂತಿಮ ಘಟ್ಟ ತಲುಪಿರುವ ಬಗ್ಗೆ ಅಧಿಕಾರಿಗಳು ತಿಳಿಸಿದರು.
ಬೆಳಗಾವಿ-ಹುನಗುಂದ-ರಾಯಚೂರ ರಸ್ತೆ ನಿರ್ಮಾಣದ ವಿಷಯವಾಗಿ ವಿಚಾರಿಸಲಾಗಿ ಫೇಸ್-1 ರಡಿ 43.8 ಕಿ.ಮಿ ರಸ್ತೆ ಕಾಮಗಾರಿಗೆ ಈಗಾಗಲೇ ಹೆಚ್ಚಿನ ಭಾಗದಲ್ಲಿ ಭೂಸ್ವಾಧೀನ ಕಾರ್ಯ ಮುಕ್ತಾಯವಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ರೈಲ್ವೆ ಇಲಾಖೆ: ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ ಕುರಿತು ಪ್ರಗತಿಯ ಬಗ್ಗೆ ವಿಚಾರಿಸಲಾಗಿ, ಸುಮಾರು 1200 ಎಕರೆ ಜಮೀನು ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ, ಈಗಾಗಲೇ ಸುಮಾರು 407 ಎಕರೆ ಜಮೀನು ಭೂಸ್ವಾಧೀನಕ್ಕೆ ಭಾಗಾಂಶವಾಗಿ ರೈತರಿಗೆ ಹಂಚಿಕೆ ಮಾಡಲು ಮೊದಲ ಹಂತವಾಗಿ ರೂ. 50 ಕೋಟಿ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಗೆ ಅನುಮೋದನೆ ದೊರೆತಿರುವ ಬಗ್ಗೆ ಡಾ. ವಿಶಾಲ ಕಾರ್ಯದರ್ಶಿಗಳು ಆರ್ಥಿಕ ಇಲಾಖೆ ಇವರು ಮಾಹಿತಿ ನೀಡಿದರು.
ಈ ಅನುದಾನವನ್ನು ರೈತರಿಗೆ ಹಂಚಿಕೆ ಮಾಡಿ, ಆಯ್ದ ಮಾರ್ಗದಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆಯಲು ಇಲಾಖೆಗೆ ಅನುಕೂಲವಾಗುವುದೆಂದು ಸಭೆಗೆ ತಿಳಿಸಲಾಯಿತು.
ಮುಂದುವರೆದು ಬೆಳಗಾವಿ ಟಿಳಕವಾಡಿ ಹತ್ತಿರ ಎಲ್.ಸಿ ನಂ: 381 ಹತ್ತಿರ ಎರಡನೆಯ ಲೇನ್ ನಿರ್ಮಾಣಕ್ಕೆ ಅವಶ್ಯವೆನಿಸಿರುವ ವಾಹನ ಸಂಚಾರ ಮಾರ್ಗ ಬದಲಿಸಲು ಪೋಲಿಸ್ ಇಲಾಖೆಯ ಆಯುಕ್ತರಿಂದ ಪರವಾನಿಗೆ ಕೇಳಿರುವ ಬಗ್ಗೆ ಅಧಿಕಾರಿಗಳು ತಿಳಿಸಿದಾಗ, ಈ ಕುರಿತು ಪೋಲಿಸ್ ಆಯುಕ್ತರರೊಂದಿಗೆ ಚರ್ಚಿಸಿ, ಅಗತ್ಯವಾಗಿ ವಾಹನ ಸಂಚಾರ ಮಾರ್ಗ ಬದಲಾವಣೆ ಪರವಾನಿಗೆ ಕೊಡಿಸುವ ಬಗ್ಗೆ ತಿಳಿಸಲಾಯಿತು.
ವಿಮಾನ ನಿಲ್ದಾಣ: ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಅಗತ್ಯವಿರುವ ಭೂಮಿಯನ್ನು ವಾಯುಸೇನೆ ನೀಡಬೇಕಿದೆ. ಆದರೆ ವಾಯು ಸೇನಾಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಇದರಿಂದಾಗಿ ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯ ನಿಧಾನವಾಗಿ ಸಾಗುತ್ತಿದೆಂದು ಅಧಿಕಾರಿಗಳು ತಿಳಿಸಿದಾಗ ಈ ವಿಷಯವಾಗಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ (ಏರ್‌ಫೋರ್ಸ್) ಚರ್ಚಿಸುವುದಾಗಿ ತಿಳಿಸಲಾಯಿತು.

