HomeLatest Newsಪಂದ್ಯಶ್ರೇಷ್ಠ ಪ್ರಶಸ್ತಿ ನನಗಲ್ಲ ಆತನಿಗೆ ಕೊಡಬೇಕಿತ್ತು, ಆತ ಇಲ್ಲದಿದ್ದರೆ ನಾವು ಸೆಮಿಫೈನಲ್ ಗೆಲ್ಲುತ್ತಿರಲಿಲ್ಲ, ನಾನು ಇಲ್ಲಿರುತ್ತಿರಲಿಲ್ಲ...

ಪಂದ್ಯಶ್ರೇಷ್ಠ ಪ್ರಶಸ್ತಿ ನನಗಲ್ಲ ಆತನಿಗೆ ಕೊಡಬೇಕಿತ್ತು, ಆತ ಇಲ್ಲದಿದ್ದರೆ ನಾವು ಸೆಮಿಫೈನಲ್ ಗೆಲ್ಲುತ್ತಿರಲಿಲ್ಲ, ನಾನು ಇಲ್ಲಿರುತ್ತಿರಲಿಲ್ಲ ಎಂದ ಸಂಜು

ನಿನ್ನೆ ( ಮಾರ್ಚ್ 5 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ಗೆಲುವನ್ನು ದಾಖಲಿಸಿ ಫೈನಲ್ ತಲುಪಿತು.

ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆರಿಸಿಕೊಂಡು ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಬ್ಯಾಟಿಂಗ್‌ಗೆ ಇಳಿದ ಭಾರತ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್, ಇಶಾನ್ ಕಿಶನ್, ಶಿವಮ್ ದುಬೆ ಬೆಂಕಿ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಬಾರಿಸಿ ಇಂಗ್ಲೆಂಡ್‌ಗೆ 254 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಮುಂದಾಗಿ ಕೊನೆಯ ಓವರ್‌ವರೆಗೆ ಪಂದ್ಯವನ್ನು ಕೊಂಡೊಯ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಿತು.

ಈ ಮೂಲಕ ಭಾರತ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಇದೇ ಭಾನುವಾರ ( ಮಾರ್ಚ್ 8 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟ್ರೋಫಿಗಾಗಿ ಕೊನೆಯ ಸೆಣಸಾಟ ನಡೆಸಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಪಂದ್ಯದಲ್ಲಿ ಗೆಲ್ಲಲು ಪ್ರಮುಖ ಕಾರಣಗಳೆಂದರೆ ಸಂಜು ಸ್ಯಾಮ್ಸನ್ ಅಬ್ಬರದ 89 ರನ್ ಆಟ, ಇಶಾನ್ ಕಿಶನ್, ದುಬೆ ಹಾಗೂ ತಿಲಕ್ ವರ್ಮಾ ಸಿಡಿದಿದ್ದು ಹಾಗೂ ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ಸರಿಯಾದ ಸಮಯದಲ್ಲಿ ಒಳ್ಳೆಯ ಓವರ್ ಬೌಲಿಂಗ್ ಮಾಡಿದ್ದು ಮತ್ತು ಅಕ್ಸರ್ ಪಟೇಲ್ ಅದ್ಭುತ ಫೀಲ್ಡಿಂಗ್‌.

ಹೀಗಾಗಿ ಪಂದ್ಯದ ಬಳಿಕ ತಂಡ ಇಂಗ್ಲೆಂಡ್ ವಿರುದ್ಧ ದೊಡ್ಡ ಮೊತ್ತ ಪೇರಿಸಲು ನೆರವಾದ ಸಂಜು ಸ್ಯಾಮ್ಸನ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪಡೆದ ಬಳಿಕ ಮಾತನಾಡಿದೆ ಸಂಜು ಸ್ಯಾಮ್ಸನ್ ‘ಬಹಳ ಖುಷಿಯಾಗ್ತಿದೆ. ಕಳೆದ ಪಂದ್ಯವಾದಾಗಿನಿಂದ ನಾನು ಒಂದೊಳ್ಳೆ ಫಾರ್ಮ್ ಕಂಡುಕೊಂಡಿದ್ದೇನೆ ಎಂಬುದು ನನಗೆ ಗೊತ್ತಿತ್ತು, ಅದನ್ನೇ ಮುಂದುವರಿಸಲು ನಾನು ಚಿಂತಿಸಿದೆ. ಇಂತಹ ಪಂದ್ಯಗಳಲ್ಲಿ ದೇಶದ ಪರ ಆಡುವಾಗ ಫಾರ್ಮ್ ಕಂಡುಕೊಳ್ಳುವುದು ಸುಲಭದ ಕೆಲಸವಲ್ಲ. ಇದೊಂದು ದೊಡ್ಡ ಪಂದ್ಯವೆಂದು ಮನಗಂಡು ಚೆನ್ನಾಗಿ ಆಡಬೇಕಿತ್ತು. ಹಾಗಾಗಿ ನಾನು ಹೆಚ್ಚಿನ ಸಮಯ ನೀಡಿ ನನ್ನ ಇನ್ನಿಂಗ್ಸ್‌ ಲೆಕ್ಕಾಚಾರ ಮಾಡಿದೆ. ನಾನು ಚೆನ್ನಾಗಿ ಸಿದ್ಧನಾಗಿದ್ದೆ ಹಾಗೂ ಅದಕ್ಕೆ ತಕ್ಕಂತೆ ಫಲಿತಾಂಶ ಸಿಕ್ಕಿದೆ. ವಾಂಖೆಡೆ ಚೆನ್ನಾಗಿ ಗೊತ್ತಿರುವುದರಿಂದ ಇಲ್ಲಿ ಎಷ್ಟೇ ರನ್ ಬಾರಸಿದರೂ ಚೇಸ್ ಮಾಡಬಹುದು ಎಂಬುದು ಗೊತ್ತಿತ್ತು. ಇಲ್ಲಿ 250 ರನ್ ಸಹ ಚೇಸ್ ಮಾಡಬಹುದಾದಾ ಮೊತ್ತು ಹಾಗೂ ಇಂಗ್ಲೆಂಡ್ ಚೆನ್ನಾಗಿ ಆಡಿದರು. ಎಲ್ಲ ಕ್ರೆಡಿಟ್ ಅವರ ಬ್ಯಾಟಿಂಗ್‌ ಶೈಲಿಗೆ ಹೋಗಬೇಕು ಹಾಗೂ ನಾವು ಒಂದೊಳ್ಳೆ ಸೆಮಿಫೈನಲ್ ಅನುಭವಿಸಿದೆವು. ನಾವು ವಾಂಖೆಡೆಯಲ್ಲಿ ಸಾಕಷ್ಟು ಕ್ರಿಕೆಟ್ ಆಡಿರುವುದರಿಂದ ಪಿಚ್‌ನ ಬಗ್ಗೆ ಚೆನ್ನಾಗಿ ಗೊತ್ತಿತ್ತು. ನಾನು ಮೊದಲೇ ಹೇಳಿದಂತೆ ಇಲ್ಲಿ ಎಷ್ಟೇ ರನ್ ಬಾರಿಸಿದರೂ ಚೇಸ್ ಮಾಡಬಹುದು. ಅವರು ಟಾಸ್ ಗೆದ್ದು ನಮ್ಮನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅಭಿಷೇಕ್ ಔಟ್ ಆದ ಬಳಿಕ ನಾನು ಇಶಾನ್ ಆಡಿದ ಜತೆಯಾಟ ಕಂಡು ಇಲ್ಲಿ 250 ರನ್ ಬಾರಿಸಬಹುದು ಎಂಬುದು ಅರ್ಥವಾಯಿತು. ಅದನ್ನೇ ನಾವು ಡ್ರೆಸಿಂಗ್ ರೂಮ್‌ನಲ್ಲೂ ಸಹ ಮಾತನಾಡಿದ್ದೆವು’ ಎಂದರು.

ಇನ್ನೂ ಮುಂದುವರಿದು ಮಾತನಾಡಿದ ಸಂಜು ಸ್ಯಾಮ್ಸನ್ ‘ತಂಡ ಆಡಿದ ಆಟ ಇಂದು ಖುಷಿ ತಂದಿದೆ, ಎಲ್ಲ ಕ್ರೆಡಿಟ್ ವಿಶ್ವದರ್ಜೆಯ ಬೌಲರ್‌, ತಲೆಮಾರಿಗೊಬ್ಬ ಬೌಲರ್‌ ಜಸ್‌ಪ್ರೀತ್ ಬುಮ್ರಾಗೆ ಸಲ್ಲಬೇಕು. ಪಂದ್ಯಶ್ರೇಷ್ಠ ಪ್ರಶಸ್ತಿ ಆತನಿಗೆ ಸಲ್ಲಬೇಕು. ಆತ ಡೆತ್ ಓವರ್‌ನಲ್ಲಿ ಜಾಣ್ಮೆಯ ಬೌಲಿಂಗ್ ಮಾಡದೇ ಇದ್ದಿದ್ದರೆ ನಾನು ಇಲ್ಲಿ ನಿಲ್ಲುತ್ತಿರಲಿಲ್ಲ ಎನಿಸುತ್ತದೆ. ಹೀಗಾಗಿ ಎಲ್ಲ ಕ್ರೆಡಿಟ್ ಬೌಲರ್‌ಗಳಿಗೆ ಸಲ್ಲಬೇಕು’ ಎಂದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular