“ಎಲ್ಲ ಗ್ರಾಮಗಳಲ್ಲಿ ನೀರಿನ ಮಾದರಿ ಪರೀಕ್ಷೆ ಕೈಗೊಳ್ಳಬೇಕು. ನೀರಿನ ಟ್ಯಾಂಕರ್ ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಸ್ವಚ್ಛಗೊಳಿಸಿರುವ ಕುರಿತು ದಿನಾಂಕಗಳನ್ನು ಬರೆಯಿಸಬೇಕು” ಎಂದು ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, “ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ಮಾಡಬೇಕು” ಎಂದರು.
“ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಕುಂದುಕೊರತೆಗಳ ಮೇಲ್ವಿಚಾರಣೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ಗಳನ್ನು ನಿಯೋಜಿಸಬೇಕು. ಗ್ರಾಮ ಪಂಚಾಯತಿ ಕಾರ್ಯಾಲಯದ ನಾಮಫಲಕ ಅಥವಾ ಗೋಡೆಯ ಮೇಲೆ ಸಂಬಂಧಪಟ್ಟ ಇಂಜಿನಿಯರ್ ಮೊಬೈಲ್ ಸಂಖ್ಯೆಯನ್ನು ಬರೆಸಬೇಕು” ಎಂದು ನಿರ್ದೇಶನ ನೀಡಿದರು.
“ಕುಡಿಯುವ ನೀರು ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ದೂರುಗಳು ಬಂದರೇ ಸಂಬಂಧಪಟ್ಟ ಇಂಜಿನಿಯರ್ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಹೀಗಾಗಿ, ಇಂಜಿನಿಯರ್ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಂದ ದೂರುಗಳು ಬಂದರೆ ಕೂಡಲೇ ಸ್ಪಂದಿಸಬೇಕು. ಸಂಬಂಧಪಟ್ಟ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು” ಎಂದು ಸೂಚಿಸಿದರು.
ನೀರಿನ ಮಾದರಿ ಪರೀಕ್ಷೆ ನಡೆಸಿ: “ಎಲ್ಲ ಗ್ರಾಮಗಳಲ್ಲಿ ನೀರಿನ ಮಾದರಿ ಪರೀಕ್ಷೆ ಕೈಗೊಳ್ಳಬೇಕು. ನೀರಿನ ಟ್ಯಾಂಕರ್ ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಸ್ವಚ್ಛಗೊಳಿಸಿರುವ ಕುರಿತು ದಿನಾಂಕಗಳನ್ನು ಬರೆಯಿಸಬೇಕು. ನೀರು ಕಲುಷಿತವಾಗದಂತೆ ಕ್ರಮವಹಿಸಬೇಕು” ಎಂದರು.
“ರೋಗ-ರುಜಿನಗಳು ಹರಡದಂತೆ ಎಚ್ಚರಿಕೆ ವಹಿಸಬೇಕು. ಗ್ರಾಪಂಮಟ್ಟದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳು ಹಾಗೂ ತಾಲೂಕಾ ಮಟ್ಟದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು” ಎಂದು ಹೇಳಿದರು.
“ಗ್ರಾಮ ಪಂಚಾಯತಿಗಳಿಗೆ ಆರ್.ಓ. ಪ್ಲ್ಯಾಂಟ್ ಗಳ ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಯಾವುದಾದರು ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾದರೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಸಬೇಕು. ಅಗತ್ಯಬಿದ್ದರೇ ಮಾತ್ರ ಬೋರವೆಲ್ ಗಳನ್ನು ಕೊರೆಯಿಸಲು ಕ್ರಮವಹಿಸಬೇಕು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಡ್ಯಾಂಗಳಲ್ಲಿ ನೀರಿನ ಮಟ್ಟ ಎಷ್ಟಿದೆ? ಎಂಬುದರ ಕುರಿತು ಪ್ರತಿದಿನ ಮಾಹಿತಿ ಪಡೆಯಬೇಕು” ಎಂದು ಹೇಳಿದರು.
“ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಡಿಯುವ ನೀರಿನ ಸಮರ್ಪಕ ಬಳಕೆ ಹಾಗೂ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು” ಎಂದರು.

