ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯು ಆಯೋಜಿಸಿದ್ದ Games, animation and visual effects conference (GAFX)ನ 7ನೇ ಆವೃತ್ತಿಯ ಸಮ್ಮೇಳನ ಉದ್ಘಾಟಿಸಿದರು.
ಸಮಾರಂಭದಲ್ಲಿ ಮಾತನಾಡಿದ ಅವರು, “ಎವೊಲ್ಯೂಶನ್ ರಿಲೋಡೆಡ್ ಎಂಬ ಥೀಮ್ ಹೊಂದಿರುವ ಬೆಂಗಳೂರು GAFX – ಗೇಮ್ಸ್, ಅನಿಮೇಶನ್ ಮತ್ತು ವಿಸುವಲ್ ಎಫೆಕ್ಟ್ಸ್ ಸಮ್ಮೇಳನದ 7ನೇ ಆವೃತ್ತಿಯನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸಿದ್ದೇನೆ” ಎಂದರು.
“ಈ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸಲು ಬೆಂಗಳೂರು ಅತ್ಯಂತ ಸೂಕ್ತವಾದ ನಗರ. ಬೆಂಗಳೂರು ಕೇವಲ ಭಾರತದ ತಂತ್ರಜ್ಞಾನ ರಾಜಧಾನಿ ಮಾತ್ರವಲ್ಲ. ಇಲ್ಲಿ ಕಲ್ಪನೆ ಮತ್ತು ಇಂಜಿನಿಯರಿಂಗ್ ನ ಸಂಗಮವಲ್ಲದೇ, ಕಲೆ ಮತ್ತು ಅಲ್ಗಾರಿದಮ್ಗಳ ಸಂಗಮವಿದೆ. ಸೃಜನಶೀಲತೆಯಿಂದ ಬಂಡವಾಳವರಗೆ , ಸಾಫ್ಟ್ ವೇರ್ ನಿಂದ ಬಾಹ್ಯಾಕಾಶ ಸಂಶೋಧನೆವರೆಗೆ, ಬಯೋಟೆಕ್ ನಿಂದ ಡೀಪ್ ಟೆಕ್ ವರೆಗೆ, ಪ್ರತಿಯೊಂದು ಕ್ರಾಂತಿಯಲ್ಲಿಯೂ ಬೆಂಗಳೂರು ಸದಾ ಮುಂಚೂಣಿಯಲ್ಲಿದೆ” ಎಂದು ಹೇಳಿದರು.
ಸಿದ್ದರಾಮಯ್ಯ ಮಾತುಗಳು
- ಇಂದು GAFX ಮುಂದಿನ ಮಹತ್ವದ ಕ್ಷೇತ್ರವಾಗಿದ್ದು, ಗೇಮ್ಸ್, ಅನಿಮೇಶನ್ ಮತ್ತು ವಿಶುವಲ್ ಎಫೆಕ್ಟ್ಸ್ ಕ್ಷೇತ್ರವು ಸಣ್ಣಮಟ್ಟದ ಸೃಜನಾತ್ಮಕ ಉದ್ಯಮವಾಗಿ ಉಳಿದಿಲ್ಲ. ಡಿಜಿಟಲ್ ಕ್ರಾಂತಿ, ಇಮರ್ಸಿವ್ ಮೀಡಿಯಾ, ಸ್ಟ್ರೀಮಿಂಗ್ ವೇದಿಕೆಗಳು, ಇ-ಸ್ಪೋರ್ಟ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ ಯುಗದಲ್ಲಿ, ಇಂದು ಮಾನವನ ಕಥೆ, ಸಂಸ್ಕೃತಿ, ಶಿಕ್ಷಣ ಮತ್ತು ಆಡಳಿತದ ಅನುಭವಗಳನ್ನು GAFX ರೂಪಿಸುತ್ತಿದೆ.
- AVGC-XR ಕ್ಷೇತ್ರದ ಮೇಲಿನ ಕರ್ನಾಟಕದ ಬದ್ಧತೆ ಇತ್ತೀಚಿನದಲ್ಲ. ನಾವು ಈ ಕ್ಷೇತ್ರದಲ್ಲಿ ಮೊದಲಿಗರು. 2017ರಲ್ಲಿ, ಭಾರತದಲ್ಲಿ ಮೊದಲ ಬಾರಿಗೆ AVGC ನೀತಿಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ. ಕೋಡ್’ ರಚನೆಯಷ್ಟೇ ಕಂಟೆಂಟ್ ರಚನೆಯೂ ಶಕ್ತಿಯುತವಾಗಲಿದೆ ಎಂಬ ದೂರದೃಷ್ಠಿಯಿಂದ ಆ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
- ನಾವು ಪ್ರಸ್ತುತ 2024–2029 ಅವಧಿಗೆ ಸಂಬಂಧಿಸಿದ ಮೂರನೇ AVGC-XR ನೀತಿಯನ್ನು ಜಾರಿಗೆ ತರುತ್ತಿದ್ದು. ಇದು ಆಡಳಿತದಲ್ಲಿ ನಿರಂತರತೆ ಮಾತ್ರವಲ್ಲದೇ, ಈ ವಲಯವನ್ನು ಬಲಪಡಿಸುವಲ್ಲಿ ನಮಗಿರುವ ದೃಢಸಂಕಲ್ಪವನ್ನು ಬಿಂಬಿಸುತ್ತದೆ.
- ನಮ್ಮ AVGC-XR ನೀತಿಯು, ಈ ಎಕೋಸಿಸ್ಟಂನ ಬಲಪಡಿಸಲು ಪ್ರೋತ್ಸಾಹಕಗಳು, ಮೂಲಸೌಕರ್ಯಗಳ ಬೆಂಬಲ, ಕೌಶಲ್ಯ ಅಭಿವೃದ್ಧಿ, ಇನ್ಕ್ಯೂಬೇಶನ್ ವ್ಯವಸ್ಥೆಗಳು ಮತ್ತು ಸಾಂಸ್ಥಿಕ ಸಹಯೋಗವನ್ನೂ ಒದಗಿಸಿದೆ.
- K-Tech, ಸ್ಟಾರ್ಟ್ಅಪ್ ಕರ್ನಾಟಕ, ಶ್ರೇಷ್ಠತಾ ಕೇಂದ್ರಗಳು (Centres of Excellence) ಹಾಗೂ ಉದ್ಯಮಗಳ ಸಹಭಾಗಿತ್ವದೊಂದಿಗೆ, ನಾವು ಕೇವಲ ನೀತಿಗಳನ್ನಷ್ಟೇ ಅಲ್ಲ, ಬೆಳವಣಿಗೆಗೂ ವೇದಿಕೆಯನ್ನು ನಿರ್ಮಿಸಿದ್ದೇವೆ.
- ನಾವು ಮುಖ್ಯವಾಗಿ ಬೆಂಗಳೂರನ್ನು ಮಾತ್ರ ಕೇಂದ್ರೀಕರಿಸದೇ, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಕಲಬುರಗಿ ಹಾಗೂ ಇತರ ಪ್ರಮುಖ ನಗರಗಳಲ್ಲಿ ಡಿಜಿಟಲ್ ಕ್ರಿಯೇಟಿವ್ ಕ್ಲಸ್ಟರ್ಗಳನ್ನು ಸೃಜಿಸಲಾಗುತ್ತಿದೆ. ನಮ್ಮ ಮುಂದಿನ ಶ್ರೇಷ್ಠ ಗೇಮ್ ಡಿಸೈನರ್ ಅಥವಾ VFX ಇನೋವೇಟರ್ಗಳು ಕೇವಲ ರಾಜಧಾನಿಯಿಂದಲ್ಲ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯಿಂದಲೂ ಹೊರಹೊಮ್ಮಬೇಕೆಂಬುದು ನಮ್ಮ ಆಶಯ.
- AVGC-XR ತಂತ್ರಜ್ಞಾನಗಳನ್ನು ಶಿಕ್ಷಣದಲ್ಲಿ ಸಂಯೋಜಿಸಲು ಹಾಗೂ ವೈದ್ಯಕೀಯ ತರಬೇತಿಯಲ್ಲಿ ಬಳಸಲು , ಮತ್ತು ಭವಿಷ್ಯದ ಪೀಳಿಗೆಗೆ ಕರ್ನಾಟಕದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲು ಕ್ರಮ ಕೈಗೊಂಡಿದ್ದೇವೆ.
- GAFX ಕ್ಷೇತ್ರವು ಕೇವಲ ಆರ್ಥಿಕ ಅವಕಾಶವಲ್ಲ. ಇದು ಒಂದು ನಾಗರಿಕತೆಗೆ ನೀಡಿರುವ ಅವಕಾಶ. ಇದು ಯುವಜನರಿಗೆ ತಮ್ಮ ಕಲ್ಪನಾಶಕ್ತಿಯನ್ನು ಜೀವನೋಪಾಯವಾಗಿ ಪರಿವರ್ತಿಸಲು , ಕಥೆಗಾರರಿಗೆ ತಮ್ಮ ಕಥಾನಿರೂಪಣೆಗೆ ಡಿಜಿಟಲ್ ರೂಪ ನೀಡಲು ಅವಕಾಶ ನೀಡುತ್ತದೆ.. ಸಣ್ಣ ಪಟ್ಟಣದಲ್ಲಿ ಕುಳಿತ ಗ್ರಾಮೀಣ ಪ್ರತಿಭೆಯೊಬ್ಬ, ಕೇವಲ ತನ್ನ ಲ್ಯಾಪ್ಟಾಪ್ ಮತ್ತು ಅಂತರ್ಜಾಲದಿಂದ ಜಾಗತಿಕ ಮಟ್ಟದ ಕಂಟೆಂಟ್ ಸೃಜಿಸಲು ಅವಕಾಶ ನೀಡುತ್ತದೆ.
- ಇಂದು ಕರ್ನಾಟಕದ ಯುವಕರು ಕೇವಲ ಉದ್ಯೋಗಾಕಾಂಕ್ಷಿಗಳಲ್ಲ, ಅವರು ವರ್ಚುವಲ್, ಸಿನಿಮೀಯ ಮತ್ತು ಸಂವಾದಾತ್ಮಕ ಪ್ರಪಂಚದ ಸೃಷ್ಟಿಕರ್ತರು. ಮುಂದಿನ 5 ವರ್ಷಗಳಲ್ಲಿ ಈ ಕ್ಷೇತ್ರ 20 ಲಕ್ಷ ಉದ್ಯೋಗಗಳನ್ನು ಕೊಡುತ್ತದೆ. ವಿನ್ಯಾಸ, ಕೋಡಿಂಗ್, ಕಥೆ ಹೇಳುವುದು, ಸಂಗೀತ, ಮೋಷನ್ ಕ್ಯಾಪ್ಚರ್, AI ಮಾಡೆಲಿಂಗ್, ನಿರ್ವಹಣೆ ಹೀಗೆ ಎಲ್ಲ ಕಡೆ ಅವಕಾಶಗಳಿವೆ. ಇಲ್ಲಿ ಕಲೆ, ಗಣಿತ, ಮನೋವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲವೂ ಒಂದಾಗುತ್ತವೆ.
- ನಮ್ಮ ಯುವಕರು ಈಗಾಗಲೇ ಹಾಲಿವುಡ್ ಸಿನಿಮಾಗಳಲ್ಲಿ, ದೊಡ್ಡ ದೊಡ್ಡ ಅಂತರರಾಷ್ಟ್ರೀಯ ಗೇಮಿಂಗ್ ಕಂಪನಿಗಳಲ್ಲಿ, ವಿಶ್ವದರ್ಜೆಯ ಅನಿಮೇಷನ್ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದ ಪ್ರತಿಭೆ ಜಾಗತಿಕ OTT ವೇದಿಕೆಗಳಿಗೆ, ಗೇಮಿಂಗ್ ಸ್ಟುಡಿಯೋಗಳಿಗೆ ತನ್ನ ಕೊಡುಗೆಯನ್ನು ನೀಡುತ್ತಿದೆ.
- ಇವತ್ತು AI (ಕೃತಕ ಬುದ್ಧಿಮತ್ತೆ) ಬಗ್ಗೆ ಮಾತಾಡದೆ ಯಾವ ಚರ್ಚೆಯೂ ಮುಗಿಯೋದಿಲ್ಲ. AI ಕಥೆ, ಸಿನಿಮಾ, ಗೇಮ್ ಎಲ್ಲವನ್ನೂ ಬದಲಾಯಿಸುತ್ತಿದೆ. ಅನಿಮೇಷನ್ನಿಂದ ಹಿಡಿದು ಧ್ವನಿ ನಿರ್ಮಾಣದವರೆಗೆ, AI ಕೆಲಸವನ್ನು ಸುಲಭ ಮಾಡುತ್ತದೆ, ವೆಚ್ಚವನ್ನು ಕಡಿಮೆ ಮಾಡುತ್ತದೆ. ಆದರೆ AI ಕೆಲವು ಕಠಿಣ ಪ್ರಶ್ನೆಗಳನ್ನೂ ಕೇಳುತ್ತದೆ. ಇದು ಕಲಾವಿದರನ್ನೇ ಇಲ್ಲದಂತೆ ಮಾಡುತ್ತದೆಯೇ? ಯಂತ್ರಗಳೇ ಸೃಜನಶೀಲತೆಯನ್ನು ತೆಗೆದುಕೊಳ್ಳುತ್ತವೆಯೇ? ಹೊಸತನ ಎಲ್ಲಿಗೆ ಹೋಗುತ್ತದೆ?.
- AI ಅನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಬೌದ್ಧಿಕ ಆಸ್ತಿಯ ಹಕ್ಕುಗಳು, ದತ್ತಾಂಶದ ಗೌಪ್ಯತೆ, ಕೆಲಸಕ್ಕೆ ನ್ಯಾಯವಾದ ಸಂಭಾವನೆ, ಹೊಸ ಕೌಶಲ್ಯ ಕಲಿಯಲು ಅವಕಾಶ – ಇವುಗಳ ಬಗ್ಗೆ ನಾವು ಯಾವಾಗಲೂ ಗಮನವಾಗಿರಬೇಕು.

