88 ವರ್ಷದ ಹಿರಿಯ ನಾಯಕ, ಮಾಜಿ ಸಚಿವರೊಬ್ಬರು ತಮಿಳುನಾಡು ವಿಧಾನಸಭೆ ಚುನಾವಣೆ 2026ಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. 234 ಸದಸ್ಯ ಬಲದ ವಿಧಾನಸಭೆ ಮಾರ್ಚ್ ಅಂತ್ಯ ಅಥವ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ.
ತಮಿಳುನಾಡಿನ ಹಿರಿಯ ರಾಜಕೀಯ ನಾಯಕ ಮತ್ತು ಮಾಜಿ ಸಚಿವ ಪನ್ರುಟ್ಟಿ ಎಸ್. ರಾಮಚಂದ್ರನ್ ‘ಎಂಜಿಆರ್ ಅಣ್ಣಾ ದ್ರಾವಿಡ ಮುನ್ನೇಟ್ರಾ ಕಳಗಂ (MGR ADMK) ಎಂಬ ಹೆಸರಿನ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದಾರೆ.
ಆದರೆ ಪನ್ರುಟ್ಟಿ ಎಸ್. ರಾಮಚಂದ್ರನ್ ತಮ್ಮ ಪಕ್ಷವು ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಟ್ವಿಸ್ಟ್ ನೀಡಿದ್ದಾರೆ. ಆದರೆ, ಪಕ್ಷದ ಸದಸ್ಯರು ಸಮಾನ ಮನಸ್ಕ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲು ಅಥವಾ ಪಕ್ಷೇತರರಾಗಿ ಸ್ಪರ್ಧಿಸಲು ಮುಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪಕ್ಷದ ಮೂಲ ಉದ್ದೇಶವನ್ನು ವಿವರಿಸಿರುವ ಅವರು, ರಾಜಕೀಯವು ಗುರುತಿನ ರಾಜಕಾರಣದಿಂದ ಸಿದ್ಧಾಂತ ಆಧಾರಿತ ರಾಜಕಾರಣಕ್ಕೆ ಬದಲಾಗಬೇಕು ಎಂದು ಹೇಳಿದ್ದಾರೆ. 5 ದಶಕಗಳಿಗೂ ಹೆಚ್ಚು ಕಾಲ ರಾಜಕೀಯ ಜೀವನದಲ್ಲಿರುವ ಅವರು, ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಸರ್ಕಾರಗಳಲ್ಲಿ ಸುಮಾರು 15 ವರ್ಷಗಳ ಕಾಲ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಹೊಸ ಪಕ್ಷದ ಉದ್ಘಾಟನಾ ಸಮಾವೇಶ ಫೆಬ್ರವರಿ 23ರಂದು ಕಾಂಚೀಪುರಂನಲ್ಲಿ ನಡೆಯಲಿದೆ. ಪನ್ರುಟ್ಟಿ ಎಸ್. ರಾಮಚಂದ್ರನ್ ಇತ್ತೀಚಿನವರೆಗೂ ಓ. ಪನ್ನೀರ್ ಸೆಲ್ವಂ ಅವರ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಈಗ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ.
ಪನ್ರುಟ್ಟಿ ಎಸ್. ರಾಮಚಂದ್ರನ್ ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳನ್ನು ಒಳಗೊಂಡಿರುವ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ. ಎಲ್ಲರಿಗೂ ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ಸಮಾಜವನ್ನು ನಿರ್ಮಿಸಲು ಹೊಸ ಸಂಘಟನೆಯು ಶ್ರಮಿಸಲಿದೆ ಎಂದು ಹೇಳಿದ್ದಾರೆ.
ಪಕ್ಷವು ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಸದಸ್ಯರು ಚುನಾವಣೆಯ ಸಮಯದಲ್ಲಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲು ಅಥವಾ ಇಚ್ಛಿಸಿದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಸ್ವತಂತ್ರರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

