ಬೆಂಗಳೂರು: ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ನ್ಯಾಯಕ್ಕಾಗಿ ಹೋರಾಡುವವರನ್ನು ಬಂಧಿಸಲಾಗುತ್ತಿದೆ. ಇದು ದುರಾಡಳಿತದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಎಮರ್ಜೆನ್ಸಿಯನ್ನು ತಂದಿದೆ. ನ್ಯಾಯಕ್ಕಾಗಿ ಹೋರಾಡುವವರ ಧ್ವನಿ ಕುಗ್ಗಿಸುವ ಕೆಲಸ ಮಾಡುತ್ತಿದೆ. ಅದರ ಭಾಗವಾಗಿ ಈಗ ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿದ್ದಾರೆ.
ಗಾಂಧಿ ಆದರ್ಶಗಳ ವಿರುದ್ಧವಾಗಿ ಈ ಸರ್ಕಾರ ನಡೆದುಕೊಳ್ಳುತ್ತಿದೆ. ಮುಡಾ ಹಗರಣವನ್ನು ಬಯಲಿಗೆಳೆದು ಹೋರಾಟ ನಡೆಸುತ್ತಿದ್ದಾರೆ. ಗಾಂಧಿ ಆದರ್ಶವಿಟ್ಟುಕೊಂಡು ಹೋರಾಡುತ್ತಿರುವ ಸ್ನೇಹಮಯಿ ಕೃಷ್ಣನ್ ಅವರನ್ನು ಕೋರ್ಟ್ ಆವರಣದಲ್ಲಿ ಬಂಧಿಸಿದ್ದು ಅಕ್ಷಮ್ಯ ಅಪರಾಧ. ಇಂತಹ ದುರಾಡಳಿತವನ್ನು ನಾವೆಂದೂ ನೋಡಿರಲಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ನ್ಯಾಯದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಸ್ನೇಹಮಯಿ ಕೃಷ್ಣ ಅರೆಸ್ಟ್:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಹಗರಣ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಬಳಿ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಕರೆದೊಯಲಾಗಿತ್ತು. ಶಾಂತಿನಗರದ ಸಿಸಿಬಿ ಕಚೇರಿಯಲ್ಲಿ ಸ್ನೇಹಮಯಿ ಕೃಷ್ಣ ಅವರನ್ನು ವಿಚಾರಣೆಗೆ ಒಳಪಡಿಸಸಿದ ಬಳಿಕ ಅವರನ್ನು ಬಂಧಿಸಲಾಗಿದೆ.
ಸ್ನೇಹಮಯಿ ಕೃಷ್ಣ, ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮುಂಬಡ್ತಿ ಪಡೆಯಲು ನಟೇಶ್ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರಿಗೆ ಕೋಟ್ಯಂತರ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು.
ತನ್ನ ವಿರುದ್ಧ ಸ್ನೇಹಮಯಿ ಕೃಷ್ಣ ಆಧಾರರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾನೂನು ಕ್ರಮ ಕೈಗೊಳ್ಳುವಂತೆ ನಟೇಶ್, ಸ್ನೇಹಮಯಿ ಕೃಷ್ಣ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿದ್ದಾರೆ.
ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಮುಂಬಡ್ತಿಗಾಗಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 1.60 ಕೋಟಿ ಲಂಚ ನೀಡಿದ್ದಾರೆ. ಕಾರಿನಲ್ಲಿ ಲಂಚದ ಹಣ ಬಂದಿದ್ದು, ಈ ಬಗ್ಗೆ ತನ್ನ ಬಳಿ ದಾಖಲೆಗಳಿವೆ ಎಂದು ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದರು.
ಇನ್ನೊಂದೆಡೆ ಮೈಸೂರಿನ ಗೌರಿ ಶಂಕರನಗರದಲ್ಲಿರುವ ಸ್ನೇಹಮಯಿ ಕೃಷ್ಣ ನಿವಾಸ ಹಾಗೂ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

