ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡಾಲ್ ಜಲಾಶಯದಲ್ಲಿ ಹುಲಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಲಿಗೆ ಉರುಳು ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಕುಮಾರ್(35) ಬಂಧಿತ ಆರೋಪಿ. ಬೈಕ್ ಕ್ಲಚ್ ವೈರ್ ಬಳಸಿ ಹಾಕಿದ್ದ ಉರುಳಿಗೆ ಸಿಕ್ಕಿ ಗುಂಡಾಲ್ ಜಲಾಶಯದ ಬಳಿ ಹುಲಿ ಸಾವನ್ನಪ್ಪಿತ್ತು.
ಆರೋಪಿ ವನ್ಯಜೀವಿ ಬೇಟೆಯಾಡಲು ಉರುಳು ಹಾಕಿದ್ದ ಎಂದು ತಿಳಿದು ಬಂದಿದೆ. ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆಬ್ರವರಿ 15ರಂದು ಬೃಹದಾಕಾರದ ಗಂಡು ಹುಲಿಯ ಮೃತದೇಹವೊಂದು ಗುಂಡಾಲ್ ಜಲಾಶಯದಲ್ಲಿ ತೇಲುತ್ತಿತ್ತು. ಸ್ಥಳಕ್ಕೆ ಭೇಟಿ ಕೊಟ್ಟ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಾಥಮಿಕ ತನಿಖೆಯಲ್ಲಿ ಕತ್ತಿಗೆ ಉರುಳು ಸಿಲುಕಿ ನೀರು ಕುಡಿಯಲು ಬಂದಾಗ ನೀರಿನಲ್ಲಿ ಹುಲಿ ಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಹುಲಿಯ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿರುವುದು ತಿಳಿದುಬಂದಿತ್ತು.
ಮೃತ ಹುಲಿ 6 ವರ್ಷದ ಗಂಡು ಹುಲಿ ಆಗಿದ್ದು, ಬರೋಬ್ಬರಿ 150 ಕೆಜಿಯಷ್ಟು ತೂಕವಿತ್ತು. ಇನ್ನು ಪೊಲೀಸರು ಉರುಳು ಹಾಕಿದವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸಿದ್ದರು. ಅದರಂತೆ ಇದೀಗ ಓರ್ವ ಬೇಟೆಗಾರನ ಬಂಧನವಾಗಿದೆ. ಬಂಧಿತ ಕುಮಾರ್ ಜೊತೆ ಇನ್ನಿತರರು ಸೇರಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಅರಣ್ಯಾಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಇನ್ನು ಗುಂಡಾಲ್ ಜಲಾಶಯದ ಸುತ್ತಮುತ್ತ ಜಮೀನುಗಳಿವೆ. ಜಮೀನಿನಲ್ಲಿ ಬೆಳೆದ ಬೆಳೆಗಳನ್ನ ಕಾಡು ಹಂದಿಗಳು ಬಂದು ನಾಶ ಮಾಡುತ್ತಿರುತ್ತವೆ. ಹಾಗಾಗಿ ಕಾಡು ಹಂದಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಕೆಲವರು ಬೈಕ್ ಕ್ಲಚ್ ಕೇಬಲ್ನ ಮೂಲಕ ಉರಳನ್ನ ಸಿದ್ಧಪಡಿಸಿ ಬೇಲಿ ಬಳಿ ಹಾಕಿರುತ್ತಾರೆ ಎಂಬುದು ಇದೇ ವೇಳೆ ತಿಳಿದುಬಂದಿದೆ.

