9 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಮುಂಬೈನ ವಿಶೇಷ ನ್ಯಾಯಾಲಯವು ಆರೋಪಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬಾಲಕಿಗೆ “ಫ್ಲೈಯಿಂಗ್ ಕಿಸ್” ನೀಡುವ ಮೂಲಕ ಕಿರುಕುಳ ನೀಡಿದ್ದಾನೆ ಎಂಬ ಆರೋಪದ ಮೇಲೆ ಈ ತೀರ್ಪು ಹೊರಬಿದ್ದಿದೆ. ಘಟನೆ ನಡೆದ ಸಮಯದಲ್ಲಿ ಬಾಲಕಿಯ ವಯಸ್ಸು 16 ವರ್ಷ ಹಾಗೂ ಆರೋಪಿಯ ವಯಸ್ಸು 19 ವರ್ಷ ಎಂದು ನ್ಯಾಯಾಲಯ ದಾಖಲಿಸಿದೆ. ಶಿಕ್ಷೆಯ ಜೊತೆಗೆ 3,000 ರೂ. ದಂಡವನ್ನೂ ವಿಧಿಸಲಾಗಿದೆ.
ಈ ಘಟನೆಯು 2017ರ ಜನವರಿ 31ರಂದು ‘ಹಳದಿ ಕುಂಕುಮ’ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದಿತ್ತು. ಆ ಸಮಯದಲ್ಲಿ ಆರೋಪಿಯು ಬಾಲಕಿಯ ಕಡೆಗೆ ನೋಡಿ ಫ್ಲೈಯಿಂಗ್ ಕಿಸ್ ನೀಡುವುದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಈ ವಿಷಯವನ್ನು ಬಾಲಕಿಯ ತಾಯಿಗೆ ತಿಳಿಸಿದ್ದರು. ತಾಯಿ ಪ್ರಶ್ನಿಸಿದಾಗ, ಕಳೆದ ಕೆಲವು ದಿನಗಳಿಂದ ಆರೋಪಿಯು ತನ್ನನ್ನು ಹಿಂಬಾಲಿಸುತ್ತಿದ್ದನೆಂದು ಮತ್ತು ಟ್ಯೂಷನ್‌ಗೆ ಹೋಗುವಾಗ ಒಮ್ಮೆ ಹಿಂದಿನಿಂದ ಬಂದು ಕೈ ಹಿಡಿದು ಎಳೆದಿದ್ದನೆಂದು ಬಾಲಕಿ ತಿಳಿಸಿದ್ದಳು. ಭಯದಿಂದ ಈ ವಿಷಯವನ್ನು ಅಲ್ಲಿಯವರೆಗೆ ಕುಟುಂಬದವರಿಗೆ ತಿಳಿಸಿರಲಿಲ್ಲ ಎಂದು ಅವಳು ಹೇಳಿದ್ದಳು.
ನಂತರ ಈ ವಿಷಯದ ಬಗ್ಗೆ ಬಾಲಕಿಯ ಕುಟುಂಬ ಸದಸ್ಯರು ಆರೋಪಿಯನ್ನು ಎಚ್ಚರಿಸಿದಾಗ, ಅವನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ ಆರೋಪಿಯ ಪರ ವಕೀಲರು, ಆರೋಪಿಯು ಡ್ಯಾನ್ಸ್ ಮಾಡುತ್ತಾ ಫ್ಲೈಯಿಂಗ್ ಕಿಸ್ ಸನ್ನೆ ಮಾಡಿದ್ದ ಎಂದು ವಾದಿಸಿದ್ದರು. ಆದರೆ ನ್ಯಾಯಾಲಯವು, ಈ ಕೃತ್ಯವು ಸಂತ್ರಸ್ತೆಯ ಗೌರವಕ್ಕೆ ಧಕ್ಕೆ ತರುವ ಲೈಂಗಿಕ ಕಿರುಕುಳದ ವ್ಯಾಪ್ತಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಆರೋಪಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

