ಚೆನ್ನೈ: ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾಕಿದ್ದ ವಾಹನಗಳನ್ನು ತಡೆದು ತಮಿಳು ಪುಂಡರು ಕನ್ನಡಿಗರ ಮೇಲೆ ದರ್ಪ ಮೆರೆದಿರುವ ಘಟನೆ ನಡೆದಿದೆ.
ಕರ್ನಾಟಕದಿಂದ ತೆರಳಿರುವ ಹಲವಾರು ವಾಹನಗಳನ್ನು ತಮಿಳುನಾಡಿನ ತೂತುಕುಡಿ ಬಳಿ ತಮಿಳು ಯುವಕರು ತಡೆದು, ಕನ್ನಡ ಬಾವುಟವನ್ನು ತೆಗೆಯುವಂತೆ ತಾಕೀತು ಮಾಡಿದ್ದಾರೆ. ಇದು ತಮಿಳುನಾಡು. ತಮಿಳುನಾಡಿನಲ್ಲಿ ಕನ್ನಡ ಬಾವುಟ ಹಾಕುವಂತಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಕನ್ನಡಿಗರ ವಾಹನವನ್ನು ತಡೆದು ತಮಿಳು ಯುವಕರು ಗಲಾಟೆ ಮಾಡುತ್ತಿರುವ ಬಗ್ಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ತಮಿಳು ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಿಂದ ಶಬರಿಮಲೆಗೆ ತೆರಳುತ್ತಿದ್ದ ಹಲವು ವಾಹನಗಳನ್ನು ತೂತುಕುಡಿ ಬಳಿ ತಡೆಯಲಾಗಿದೆ. ಚಾಮರಾಜನಗರದ ಹರದನಹಳ್ಳಿಯ ಮಣಿ ನಾಯ್ಕ ಹಾಗೂ ಸ್ನೇಹಿತರು ಟಿಟಿ ವಾಹನದಲ್ಲಿ ಕನ್ನಡ ಧ್ವಜ ಅಳವಡಿಸಿಕೊಂಡು ಯಾತ್ರೆಗೆ ತೆರಳುತ್ತಿದ್ದಾಗ, ತಮಿಳುನಾಡಿನ ತೂತುಕುಡಿ ಸಮೀಪ ವಾಹನವನ್ನು ಅಡ್ಡಹಾಕಿ ಕೆಲ ತಮಿಳು ಯುವಕರು ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಾಹನದಲ್ಲಿದ್ದ ಕನ್ನಡ ಧ್ವಜವನ್ನು ತೆಗೆದುಹಾಕುವಂತೆ ಒತ್ತಾಯಿಸಿ, ‘ತಮಿಳುನಾಡಿನಲ್ಲಿ ಕನ್ನಡ ಧ್ವಜ ಹಾಕಲು ಅವಕಾಶ ಇಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಘಟನೆ ವೇಳೆ ಪೊಲೀಸರು ಸ್ಥಳದಲ್ಲಿದ್ದರೂ, ಯುವಕರು ರೌಡಿಸಂ ತೋರಿದರೆಂಬ ಆರೋಪ ಕೇಳಿಬಂದಿದ್ದು, ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾತ್ರೆಗೆ ತೆರಳಿದ್ದ ಅಯ್ಯಪ್ಪ ಮಾಲಾಧಾರಿಗಳು ಈ ರೀತಿಯ ಘಟನೆಗಳನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

