ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಮತ್ತಿಘಟ್ಟ ಫಾಅಲ್ಸ್ ಗೆ ಪ್ರವಾಸಕ್ಕೆ ಬಂದಿದ್ದ ಬಿ.ಟೆಕ್ ವಿದ್ಯಾರ್ಥಿ ಜಲಪಾತದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
18 ವರ್ಷದ ಶಿವೋಹಂ ಅನಂತ್ ತಿವಾರಿ ಮೃತ ವಿದ್ಯಾರ್ಥಿ. ಮಣಿಪಾಲ್ ನ ಎಂ.ಐ.ಟಿಯಲ್ಲಿ ಬಿ.ಟೆಕ್ ಎರಡನೇ ಸೆಮಿಸ್ಟರ್ ಓದುತ್ತಿದ್ದ. ಪ್ರವಾಸಕ್ಕೆಂದು ಬಂದಿದ್ದ ವೇಳೆ ಫಾಲ್ಸ್ ನೀರಿನಲ್ಲಿ ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ.
ಮಣಿಪಾಲ್ ದ ಬಿ.ಟೆಕ್ ಹಾಗೂ ಜರ್ನಲಿಸಂ ವಿಭಾಗದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವಾಸಕ್ಕೆ ಹೋಗಿದ್ದರು. ಹೊನ್ನಾವರ ಹಾಗೂ ಶಿರಸಿ ಮತ್ತಿಘಟ್ಟ ಭಾಗಕ್ಕೆ ತೆರಳಿದ್ದರು. ಕೆಲ ವಿದ್ಯಾರ್ಥಿಗಳು ಮತ್ತಿಘಟ್ಟ ಫಾಲ್ಸ್ ಗೆ ಹೋಗಿದ್ದಾಗ ಫಾಲ್ಸ್ ನೀರಿಗೆ ಇಳಿದಿದ್ದಾರೆ. ಈ ವೇಳೆ ವಿದ್ಯಾರ್ಥಿ ಶಿವೋಹಂ ಜಲಪಾತದ ನೀರಿನಲ್ಲಿ ಈಜಲು ತೆರಳಿದ್ದಾನೆ. ಈಜಲು ಹೋದವನು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಮುಳುಗು ತಜ್ಞರು, ಪೊಲೀಸರು ದೌಡಾಯಿಸಿ ವಿದ್ಯಾಎಥಿಗಾಗಿ ಶೋಧ ನಡೆಸಲಾಗಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರ್ಷವಿಡೀ ಧುಮ್ಮಿಕ್ಕಿ ಹರಿಯುವ ಜಲಪಾತಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಮತ್ತಿಘಟ್ಟ ಫಾಲ್ಸ್ ಕೂಡ ಒಂದು. ಶಿರಸಿಯಿಂದ ಸುಮಾರು 42 ಕಿ. ಮೀ. (ಹೆಗಡೆಕಟ್ಟಾ-ಯಾಣ ಮಾರ್ಗದಲ್ಲಿ ಸಾಗಬೇಕು) ದೂರದಲ್ಲಿ ಇರುವ ಈ ಜಲಪಾತ ಹಸೇಹಳ್ಳದಿಂದ ರೂಪುಗೊಂಡಿದೆ.

