ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಕೆಲಸ ಪಡೆಯುವುದು ಸುಲಭವಲ್ಲ. ಕಂಪನಿಗಳ HR ಮತ್ತು ಫೌಂಡರ್ಗಳ ಇನ್ಬಾಕ್ಸ್ಗಳು ಪ್ರತಿದಿನ ನೂರಾರು ಇಮೇಲ್ಗಳಿಂದ ತುಂಬಿರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ತಮ್ಮ ಇಮೇಲ್ ಅನ್ನು ಅವರು ಓದಲಿ ಎಂಬ ಕಾರಣಕ್ಕೆ ಅಭ್ಯರ್ಥಿಗಳು ಹೊಸ ಹೊಸ ದಾರಿಗಳನ್ನು ಹುಡುಕುತ್ತಾರೆ. ಆದರೆ ಗಮನ ಸೆಳೆಯಲು ಕಂಪನಿಯ CEO ಅಥವಾ HR ಮೇಲೆ ಗಂಭೀರ ಆರೋಪ ಮಾಡುವುದು ಸರಿಯೇ?
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಕೆಲವು ‘ಜಾಬ್ ಅಪ್ಲಿಕೇಶನ್’ ಇಮೇಲ್ಗಳು ವೈರಲ್ ಆಗುತ್ತಿವೆ, ಇವುಗಳನ್ನು ನೋಡಿ ಸ್ವತಃ ಫೌಂಡರ್ಗಳೇ ಬೆಚ್ಚಿಬಿದ್ದಿದ್ದಾರೆ. ಕೆಲಸ ಕೇಳುವವರು ಇಮೇಲ್ನ ಸಬ್ಜೆಕ್ಟ್ ಲೈನ್ ಅನ್ನು ಎಷ್ಟು ವಿಚಿತ್ರವಾಗಿಟ್ಟಿದ್ದಾರೆ ಎಂದರೆ, ಯಾರೇ ಆದರೂ ಒಂದು ಕ್ಷಣ ದಂಗಾಗುತ್ತಾರೆ. ಇಮೇಲ್ನ ಸಬ್ಜೆಕ್ಟ್ ಹೀಗಿತ್ತು- “ನಿಮ್ಮ ಹೆಸರು Epstein ಫೈಲ್ಸ್ನಲ್ಲಿದೆ” (Your name is in Epstein Files). ಈ ಇಮೇಲ್ಗಳಲ್ಲಿ ಏನಿದೆ ಮತ್ತು ಫೌಂಡರ್ಗಳು ಇದಕ್ಕೆ ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬ ವಿವರ ಇಲ್ಲಿದೆ.
ಅಭ್ಯರ್ಥಿಯ ವಿಚಿತ್ರ ನಡೆ
Legitt AI ಕಂಪನಿಯ ಫೌಂಡರ್ ಮತ್ತು CEO ಹರ್ಷದೀಪ್ ರಪಾಲ್ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ವಿಲಕ್ಷಣವಾದ ಜಾಬ್ ಅಪ್ಲಿಕೇಶನ್ನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. ಈ ಇಮೇಲ್ ಅನ್ನು ಐಐಟಿ (IIT) ಹೈದರಾಬಾದ್ನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯೊಬ್ಬ ಕಳುಹಿಸಿದ್ದಾನೆ.ಇಮೇಲ್ನ ಸಬ್ಜೆಕ್ಟ್ “ನಿಮ್ಮ ಹೆಸರು ಎಪ್ಸ್ಟೀನ್ ಫೈಲ್ಸ್ನಲ್ಲಿದೆ” ಎಂದಿತ್ತು. ಅಂದಹಾಗೆ, ‘ಎಪ್ಸ್ಟೀನ್ ಫೈಲ್ಸ್’ ಎಂಬುದು ಅಮೆರಿಕದ ಕುಖ್ಯಾತ ಅಪರಾಧಿ ಜೆಫ್ರಿ ಎಪ್ಸ್ಟೀನ್ನೊಂದಿಗೆ ಸಂಪರ್ಕ ಹೊಂದಿದ್ದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಾಗಿದೆ. ಇದರಲ್ಲಿ ಹೆಸರಿರುವುದು ಎಂದರೆ ಅದು ಅಪರಾಧ ಮತ್ತು ಅವಮಾನದ ಸಂಗತಿಯಾಗಿದೆ.
ಗಾಬರಿಗೊಂಡ ಹರ್ಷದೀಪ್ ಅವರು ಇಮೇಲ್ ತೆರೆದು ನೋಡಿದಾಗ, ಅದರ ಮೊದಲ ಸಾಲು ಹೀಗಿತ್ತು- “ಹಲೋ ಹರ್ಷದೀಪ್, ನಾನು ಸುಮ್ಮನೆ ತಮಾಷೆ ಮಾಡುತ್ತಿದ್ದೆ, ನೀವು ಈ ಇಮೇಲ್ ತೆರೆಯಲಿ ಎಂಬ ಕಾರಣಕ್ಕೆ ಹೀಗೆ ಬರೆದೆ.” ಅದರ ನಂತರ ಅಭ್ಯರ್ಥಿಯು ತನ್ನ ಪರಿಚಯ ನೀಡಿದ್ದಲ್ಲದೆ, ರೆಸ್ಯೂಮೆ ಲಗತ್ತಿಸಿ ಕಂಪನಿಯ ಪ್ರಾಜೆಕ್ಟ್ ಬಗ್ಗೆ ಚರ್ಚಿಸಲು ಆಸಕ್ತಿ ವ್ಯಕ್ತಪಡಿಸಿದ್ದಾನೆ.
CEO ಖಡಕ್ ಪ್ರತಿಕ್ರಿಯೆ
ಹರ್ಷದೀಪ್ ಅವರಿಗೆ ಈ ‘ತಮಾಷೆ’ ಕಿಂಚಿತ್ತೂ ಇಷ್ಟವಾಗಲಿಲ್ಲ. ಸ್ಕ್ರೀನ್ಶಾಟ್ ಹಂಚಿಕೊಂಡ ಅವರು, “ಇದು ಅತ್ಯಂತ ಅಪ್ರೊಫೆಷನಲ್ (Unprofessional) ನಡವಳಿಕೆ. ದಯವಿಟ್ಟು ಹೀಗೆ ಮಾಡಬೇಡಿ. ನಮ್ಮ ಕಂಪನಿಯು ಕಾಂಟ್ರಾಕ್ಟ್ ವ್ಯವಹಾರದಲ್ಲಿದೆ, ಇಲ್ಲಿ ಜವಾಬ್ದಾರಿ ಮತ್ತು ವೃತ್ತಿಪರತೆ ಬಹಳ ಮುಖ್ಯ. ನಿಮ್ಮ ಮೊದಲ ಇಮೇಲ್ ಹೀಗಿದ್ದರೆ, ಯಾವ ಫೌಂಡರ್ ಕೂಡ ನಿಮಗೆ ಪ್ರತಿಕ್ರಿಯಿಸುವುದಿಲ್ಲ” ಎಂದು ಬರೆದಿದ್ದಾರೆ. ಕಾಲೇಜು ಪ್ರಾಜೆಕ್ಟ್ ಮತ್ತು ನಿಜವಾದ ಕಾರ್ಪೊರೇಟ್ ಪ್ರಪಂಚದ ನಡುವೆ ಬಹಳ ವ್ಯತ್ಯಾಸವಿದೆ ಎಂದು ವಿದ್ಯಾರ್ಥಿಗೆ ಬುದ್ಧಿ ಹೇಳಿದ್ದಾರೆ.
ಮತ್ತೊಂದು ಇಮೇಲ್ ವೈರಲ್
ಇದೇ ರೀತಿಯ ಘಟನೆ ಯೋಗಾಂಶು ಪಾಲ್ ಎಂಬುವವರಿಗೂ ಎದುರಾಗಿದೆ. ಅವರಿಗೂ ಕೂಡ “ನಿಮ್ಮ ಹೆಸರು ಎಪ್ಸ್ಟೀನ್ ಫೈಲ್ಸ್ನಲ್ಲಿದೆ” ಎಂಬ ಸಬ್ಜೆಕ್ಟ್ನೊಂದಿಗೆ ಇಮೇಲ್ ಬಂದಿದೆ. ಅದರ ಒಳಗೆ “ಕ್ಷಮಿಸಿ, ಸಾವಿರಾರು ಇಮೇಲ್ಗಳ ನಡುವೆ ನಿಮ್ಮ ಗಮನ ಸೆಳೆಯಲು ಇದೊಂದೇ ದಾರಿಯಾಗಿತ್ತು” ಎಂದು ಬರೆದು ಮಾರ್ಕೆಟಿಂಗ್ ಕೆಲಸಕ್ಕಾಗಿ ವಿನಂತಿಸಲಾಗಿದೆ.
ನೆಟ್ಟಿಗರ ಆಕ್ರೋಶ
ಈ ಪೋಸ್ಟ್ಗಳು ವೈರಲ್ ಆಗುತ್ತಿದ್ದಂತೆ ಜನರು ಅಭ್ಯರ್ಥಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ:ಇಂದಿನ ಯುವಕರಿಗೆ ಕೇವಲ ಅಗ್ಗದ ಜನಪ್ರಿಯತೆ ಬೇಕು, ಇವರಲ್ಲಿ ವೃತ್ತಿಪರತೆಯೇ ಇಲ್ಲ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.”ಇಮೇಲ್ ಕಳುಹಿಸುವ ಮುನ್ನ ಅವರು ಏನು ಯೋಚಿಸುತ್ತಾರೆ? ಇದು ಕೇವಲ ಅಪ್ರೊಫೆಷನಲ್ ಮಾತ್ರವಲ್ಲ, ಕಂಪನಿಗೆ ಅಪಾಯಕಾರಿ ಕೂಡ ಹೌದು” ಎಂದು ಇನ್ನೊಬ್ಬರು ಬರೆದಿದ್ದಾರೆ.”ಈ ಅಭ್ಯರ್ಥಿಯು ತನ್ನ ಕೆಲಸದಲ್ಲಿ ಎಷ್ಟೇ ಶ್ರೇಷ್ಠನಾಗಿದ್ದರೂ, ಇಂತಹ ಮನಸ್ಥಿತಿಯವರಿಗೆ ಯಾರೂ ಕೆಲಸ ಕೊಡುವುದಿಲ್ಲ” ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

