ವಿಜಯಪುರ ಜಿಲ್ಲೆಯ 30 ವರ್ಷದ ಯುವಕ ಬಲರಾಮ ಬಾಗಲಕೋಟ್ ಅವರು 9 ಫೆಬ್ರವರಿ 2026 ರಂದು ಬೈಕ್ ಅಪಘಾತಕ್ಕೊಳಗಾದ ಕಾರಣ BLDE-DUನ ಬಿ.ಎಂ. ಪಾಟೀಲ್ ಆಸ್ಪತ್ರೆಗೆ ದಾಖಲಿಸಲಾಯಿತು.
ತಲೆಗೆ ಮಾರಣಾಂತಿಕ ಪೆಟ್ಟು ಬಿದ್ದಿದ್ದು ತುರ್ತು-ಗಂಭೀರ ಮತ್ತು ನಿರಂತರ ಪ್ರಯತ್ನಗಳ ಹೊರತಾಗಿಯೂ, ಚಿಕಿತ್ಸೆ ಫಲಕಾರಿಯಾಗದೆ ಅವರನ್ನು ಮಿದುಳು ಮೃತ ಎಂದು ಘೋಷಿಸಬೇಕಾಯಿತು.
ಈ ಹೃದಯ ವಿದ್ರಾವಕ ಸಂದರ್ಭದಲ್ಲಿ, ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿಯವರು ಕುಟುಂಬದವರೊಂದಿಗೆ ಸಹಾನುಭೂತಿ ಮತ್ತು ಸಂವೇದನಾಶೀಲತೆಯಿಂದ ಅಂಗಾಂಗ ದಾನದ ಮಹತ್ವದ ಬಗ್ಗೆ ಸಲಹೆ ನೀಡಿದರು. ಮಾನವೀಯತೆ ಮೆರೆದ ಆ ಕುಟುಂಬವು ಬಲರಾಮ ಅವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿತು.
ಒಂದು ಮೂತ್ರಪಿಂಡ ಇದೇ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಸಿ ಆಗಿ ಮತ್ತೊರ್ವರ ಹೊಸ ಬದುಕಿಗೆ ಕಾರಣವಾಯಿತು. ಎರಡು ಕಾರ್ನಿಯಾಗಳನ್ನು ಇಲ್ಲಿನ ರೋಗಿಗಳ ದೃಷ್ಟಿ ಮರುಸ್ಥಾಪನೆಗಾಗಿ ಪಡೆದುಕೊಳ್ಳಲಾಯಿತು. ಇನ್ನೊಂದು ಮೂತ್ರಪಿಂಡವನ್ನು ಕಲಬುರಗಿಯ ಚಿರಾಯು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅದು ಇನ್ನೊಂದು ಜೀವ ಉಳಿಸಿತು.
BLDE-DU ಬಿ.ಎಂ. ಪಾಟೀಲ್ ಆಸ್ಪತ್ರೆ, ವಿಜಯಪುರದಲ್ಲಿ ನಡೆದ ಪ್ರಥಮ ಕೆಡಾವೆರಿಕ್ (ಮೃತ ದೇಹದ) ಅಂಗಾಂಗ ಕಸಿಯಾಗಿದೆ.
ಬಲರಾಮ ಅವರ ಬದುಕು ಅಕಾಲಿಕವಾಗಿ ಅಂತ್ಯ ಕಂಡರೂ, ಅವರು ದಾನ ಮಾಡಿದ ಅಂಗಾಂಗಗಳಲ್ಲಿ ಇಂದಿಗೂ ಜೀವಂತ. ಕುಟುಂಬದ ಮಾನವೀಯತೆ ಮತ್ತು ಧೈರ್ಯಕ್ಕೆ ನಮ್ಮ ಹೃದಯಸ್ಪರ್ಶಿ ನಮನಗಳು. ಬಲರಾಮ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

