ಚೆನ್ನೈ: ತಮಿಳು ಸೂಪರ್ ಸ್ಟಾರ್ ಧನುಷ್ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಳೆಯ ಸಿನಿಮಾ ಯೋಜನೆಯೊಂದನ್ನು ಪೂರ್ಣಗೊಳಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರಸಿದ್ಧ ನಿರ್ಮಾಣ ಸಂಸ್ಥೆ ‘ತೆನಾಂಡಲ್ ಫಿಲ್ಮ್ಸ್’ (Thenandal Films) ಧನುಷ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದು, 20 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ
ವರದಿಯ ಪ್ರಕಾರ, 2016ರಲ್ಲಿ ಧನುಷ್ ತೆನಾಂಡಲ್ ಫಿಲ್ಮ್ಸ್ ಅಡಿಯಲ್ಲಿ ‘ನಾನ್ ರುದ್ರನ್’ (Naan Rudran) ಎಂಬ ಸಿನಿಮಾವನ್ನು ಒಪ್ಪಿಕೊಂಡಿದ್ದರು.ಧನುಷ್ ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ನಟಿಸುವುದಾಗಿ ಆರಂಭದಲ್ಲಿ ಒಪ್ಪಿಕೊಂಡಿದ್ದರು. ಆದರೆ, ಸಂಸ್ಥೆಯು ಅವರ ಬೇಡಿಕೆಗಳಿಗೆ ಸಮ್ಮತಿಸಿದರೂ, ಧನುಷ್ ಪೂರ್ಣ ಪ್ರಮಾಣದ ಚಿತ್ರಕಥೆಯನ್ನು ಒದಗಿಸಿಲ್ಲ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
ಧನುಷ್ ಈ ಹಳೆಯ ಪ್ರಾಜೆಕ್ಟ್ ಮುಗಿಸುವ ಬದಲು ಬೇರೆ ಸಿನಿಮಾಗಳಿಗೆ ‘ಕಾಲ್ ಶೀಟ್’ ನೀಡುತ್ತಿದ್ದಾರೆ. ಇದರಿಂದ ಅರ್ಧಕ್ಕೇ ಚಿತ್ರೀಕರಣ ನಿಂತಿದ್ದು, ನಿರ್ಮಾಣ ಸಂಸ್ಥೆಗೆ ಭಾರಿ ಹಣಕಾಸಿನ ನಷ್ಟವಾಗಿದೆ ಎಂದು ವಕೀಲ ಎ. ಚಿದಂಬರಂ ಅವರ ಮೂಲಕ ನೋಟಿಸ್ ನೀಡಲಾಗಿದೆ.
20 ಕೋಟಿ ದಂಡದ ಎಚ್ಚರಿಕೆ
ಆರಂಭಿಕ ಹಂತದಲ್ಲಿ ಮಾಡಲಾದ ಹೂಡಿಕೆಯನ್ನು ವಸೂಲಿ ಮಾಡಲು ಸಂಸ್ಥೆಯು 20 ಕೋಟಿ ರೂ. ಕೇಳಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಈ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಬ್ಯಾನರ್ ಎಚ್ಚರಿಸಿದೆ. ಈ ವಿಚಾರವಾಗಿ ಧನುಷ್ ಕಡೆಯಿಂದ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಧನುಷ್ ಅವರ ಮುಂದಿನ ಸಿನಿಮಾ ‘D55’
ಕಾನೂನು ಸಂಕಷ್ಟದ ನಡುವೆಯೂ ಧನುಷ್ ತಮ್ಮ 55ನೇ ಸಿನಿಮಾವನ್ನು ಘೋಷಿಸಿದ್ದಾರೆ.ಸಿನಿಮಾ ಖ್ಯಾತಿಯ ರಾಜ್‌ಕುಮಾರ್ ಪೆರಿಯಸಾಮಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.ಧನುಷ್ ಅವರ ಸ್ವಂತ ಬ್ಯಾನರ್ ‘ವುಂಡರ್ಬಾರ್ ಫಿಲ್ಮ್ಸ್’ (Wunderbar Films) ಮತ್ತು ‘ಆರ್ ಟೇಕ್ ಸ್ಟುಡಿಯೋಸ್’ ಜಂಟಿಯಾಗಿ ಈ ಬೃಹತ್ ಚಿತ್ರವನ್ನು ನಿರ್ಮಿಸುತ್ತಿವೆ. ಈ ಚಿತ್ರದ ಘೋಷಣೆಯು ಧನುಷ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

