ಬೆಂಗಳೂರು: ಮಾರ್ಚ್ 1ರಿಂದ ಓಪಿಡಿ ಸೇವೆ ಬಂದ್ ಮಾಡಲಾಗುವುದು ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎಚ್ಚರಿಕೆ ನೀಡಿದೆ.
ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ, ಖಾಲಿ ಹುದ್ದೆಗಳ ಭರ್ತಿ, ಸಮರ್ಪಕ ಔಷಧ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಮಾರ್ಚ್ 1 ರಿಂದ 15 ರವರೆಗೆ ಹೊರರೋಗಿಗಳ ಸೇವೆ ನಿಲ್ಲಿಸಿ ಕೇವಲ ತುರ್ತು ಸೇವೆಗಳನ್ನು ಮಾತ್ರ ನೀಡುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎಚ್ಚರಿಕೆ ನೀಡಿದೆ.
ಅಲ್ಲದೇ, ಎರಡನೇ ಹಂತದ ಹೋರಾಟವಾಗಿ ಮಾರ್ಚ್ 16 ರಿಂದ ಬೇಡಿಕೆ ಈಡೇರಿಸುವವರೆಗೆ ಎಲ್ಲಾ ವೈದ್ಯರು, ಅಧಿಕಾರಿಗಳು ಮತ್ತು ನೌಕರರು ಅನಿರ್ಧಿಷ್ಟಾವಧಿ ಕರ್ತವ್ಯಕ್ಕೆ ಗೈರು ಹಾಜರಾಗುತ್ತೇವೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ನೀಡಲಾಗಿದೆ.
ಮುಷ್ಕರದ ಹಾದಿ ತುಳಿದ ಸರ್ಕಾರಿ ವೈದ್ಯರು ಮತ್ತು ವೈದ್ಯಾಧಿಕಾರಿಗಳ ಅಹವಾಲು ಆಲಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ಕರೆದಿದ್ದರು. ಆದರೆ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿರುವ ವೈದ್ಯಾಧಿಕಾರಿಗಳ ಸಂಘ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಓಪಿಡಿ ಸೇವೆ ಬಂದ್ ಮಾಡುವ ಬಗ್ಗೆ ತಿಳಿಸಿದೆ.

