ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಬಂತ್ರಾ ಎಂಬಲ್ಲಿ ಗುರುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಚಲಾಯಿಸುತ್ತಿದ್ದ ವೇಗದ ಸ್ವಿಫ್ಟ್ ಡೈರ್ ಕಾರು ನಿಯಂತ್ರಣ ತಪ್ಪಿ ಪಾದಚಾರಿಗಳು ಮತ್ತು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ಲಕ್ನೋದಿಂದ ಕಾನ್ಪುರದತ್ತ ಸಾಗುತ್ತಿದ್ದ ಕಾರು, ಸಂಜೆ 6 ಗಂಟೆ ಸುಮಾರಿಗೆ ಕಾನ್ಪುರ ರಸ್ತೆಯ ಹನುಮಾನ್ ದೇವಾಲಯದ ಸಮೀಪವಿರುವ ಚಾಟ್ ಸ್ಟಾಲ್ ಬಳಿ ನಿಂತಿದ್ದ ಜನರ ಗುಂಪಿಗೆ ಡಿಕ್ಕಿ ಹೊಡೆದಿದೆ.ಕಾರು ಮೊದಲು ಜನರಿಗೆ ಡಿಕ್ಕಿ ಹೊಡೆದು, ನಂತರ ಅಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್, ಆಟೋರಿಕ್ಷಾ ಮತ್ತು ಇತರೆ ವಾಹನಗಳಿಗೆ ಗುದ್ದಿದೆ.ಈ ಅಪಘಾತದಲ್ಲಿ 6 ವರ್ಷದ ದೀಕ್ಷಾಂತ್ ಪಟೇಲ್ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸಾಧನಾ ಪಟೇಲ್, ಮೀನಾ ದೇವಿ (60), ಅರ್ಮಾನ್ (12) ಮತ್ತು ಇ-ರಿಕ್ಷಾ ಚಾಲಕ ಅವಧ್ ಬಿಹಾರಿ (42) ಗಾಯಗೊಂಡಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.
ಪಾರ್ಟಿ ಮುಗಿಸಿ ಜಾಲಿ ರೈಡ್ ಹೊರಟಿದ್ದ ಅಪ್ರಾಪ್ತ: ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ವಿದ್ಯಾರ್ಥಿಯು ಶಾಲೆಯ ಫೇರ್ವೆಲ್ ಪಾರ್ಟಿ ಮುಗಿಸಿ ಗೆಳತಿಯೊಂದಿಗೆ ಜಾಯ್ರೈಡ್ ಹೊರಟಿದ್ದನು. ಅಪಘಾತ ನಡೆದ ತಕ್ಷಣ ಆತ ಸ್ಥಳದಿಂದ ಪರಾರಿಯಾಗಿದ್ದನು. ತಲೆಮರೆಸಿಕೊಳ್ಳುವ ಮೊದಲು ತನ್ನೊಂದಿಗೆ ಇದ್ದ ಯುವತಿಯನ್ನು ಸುರಕ್ಷಿತ ಸ್ಥಳದಲ್ಲಿ ಬಿಟ್ಟು ಹೋಗಿದ್ದನು ಎಂದು ತಿಳಿದುಬಂದಿದೆ.
ಆರೋಪಿ ಬಂಧನ: ಲಕ್ನೋ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದು, ಆರೋಪಿ ಗೌರವ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಕಾನ್ಪುರದಲ್ಲಿ ಇತ್ತೀಚೆಗೆ ನಡೆದ ಲಂಬೋರ್ಗಿನಿ ಕಾರು ಅಪಘಾತದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

