ಕರ್ನಾಟಕದ ಕಾಂಗ್ರೆಸ್ ಸರ್ಕಾರ 1000 ದಿನಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಹಾವೇರಿ ನಗರದ ಅಜ್ಜಯಸ್ವಾಮಿ ದೇವಸ್ಥಾನ ಬಳಿಯ ಮೈದಾನದಲ್ಲಿ ಫೆಬ್ರವರಿ 14ರಂದು ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ನಡೆಯಲಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಮಾವೇಶದ ತಯಾರಿಯನ್ನು ಪರಿಶೀಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಯಶಸ್ವಿಯಾಗಿ 1000 ದಿನಗಳ ಆಡಳಿತವನ್ನು ಪೂರೈಸಿದ ಹಿನ್ನಲೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಈ ಸಾರ್ಥಕ ಆಡಳಿತದ ಸಂಭ್ರಮವನ್ನು ಜನತೆಯೊಂದಿಗೆ ಆಚರಿಸಲು ಶನಿವಾರ ಹಾವೇರಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಸಾಧನಾ ಸಮಾವೇಶದ ಪೂರ್ವಸಿದ್ಧತೆಗಳನ್ನು ವೀಕ್ಷಿಸಿದರು. ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೊಳಿಸಿದೆ. ಈಗ ಶನಿವಾರದ ಸಮಾವೇಶದಲ್ಲಿ 6ನೇ ಗ್ಯಾರಂಟಿಯನ್ನು ಜಾರಿಗೊಳಿಸಲಾಗುತ್ತದೆ. ಈಗಾಗಲೇ 5 ಗ್ಯಾರಂಟಿಗಳ ಮೂಲಕ ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಆರ್ಥಿಕ ಶಕ್ತಿಯನ್ನು ತುಂಬಲಾಗಿದೆ.
6ನೇಯ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆಯ ಮುಖಾಂತರ 1 ಲಕ್ಷ ಕಂದಾಯ ಗ್ರಾಮ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಯನ್ನು ಬೃಹತ್ ಸಮಾವೇಶದಲ್ಲಿ ಮಾಡಲಾಗುತ್ತದೆ.
ಕಾಂಗ್ರೆಸ್ ಸರ್ಕಾರದ ಸಮರ್ಥ ಆಡಳಿತದಲ್ಲಿ ಸರ್ಕಾರದ ಸಾಧನೆಗಳನ್ನು ಜನಮಾನಸಕ್ಕೆ ತಲುಪಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ಈ ವೇದಿಕೆ ಸಾಕ್ಷಿಯಾಗಲಿದೆ.
6ನೇ ಗ್ಯಾರಂಟಿ ಯೋಜನೆ: ಸರ್ಕಾರದ 6ನೇ ಗ್ಯಾರಂಟಿ ಯೋಜನೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ಸರ್ಕಾರಕ್ಕೆ 1000 ದಿನ ಹಿನ್ನೆಲೆ ಭೂಮಿ ಗ್ಯಾರಂಟಿ ಜಾರಿ ನಮ್ಮ ಸರ್ಕಾರದ 1000 ದಿನಗಳ ಸಾಧನೆ ಬಗ್ಗೆ ನಮಗೆ ಸಂತೋಷವಿದೆ. ಈ ಅಭೂತಪೂರ್ವ ಕ್ಷಣವನ್ನು ನಾವು ಸಂಭ್ರಮಿಸುತ್ತಿದ್ದು, ಈ ಸಂದರ್ಭದಲ್ಲಿ ಮತ್ತೊಂದು ಗ್ಯಾರಂಟಿಯಾದ ಭೂಮಿ ಗ್ಯಾರಂಟಿಯನ್ನು ರಾಜ್ಯದ ಜನರಿಗೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಭೂಮಿಯ ಹಕ್ಕು ಪತ್ರ ಇಲ್ಲದ ಲಕ್ಷಾಂತರ ಜನರಿಗೆ ನಾವು ಹಕ್ಕುಪತ್ರ, ಪಟ್ಟಾ ದಾಖಲೆ ನೀಡುತ್ತಿದ್ದೇವೆ. ಜೊತೆಗೆ ಜನರಿಗೆ ಪಕ್ಕಾ ಖಾತೆ ಹಂಚಿಕೆ ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳ ಹೊರತಾಗಿ ಇದು ನಮ್ಮ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.

