ತಮಿಳುನಾಡು ವಿಧಾನಸಭೆ ಚುನಾವಣೆ 2026 ತಯಾರಿ ಆರಂಭವಾಗಿದೆ. ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್. ಆದರೆ ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಮುಂದುವರೆಯಲಿದೆಯೇ? ಎಂಬುದು ಸದ್ಯಕ್ಕೆ ಗೊಂದಲದ ಗೂಡಾಗಿದೆ.
ಸಿಎಂ ಎಂ.ಕೆ.ಸ್ಟಾಲಿನ್ ಕಾಂಗ್ರೆಸ್ ಜೊತೆಗಿನ ಮೈತ್ರಿಯ ಕುರಿತು ಮಾತನಾಡಿ, ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈಗ ಕಾಂಗ್ರೆಸ್ ನಾಯಕರೊಬ್ಬರು ಈ ಕುರಿತು ಮಾತನಾಡಿದ್ದಾರೆ.
ಕಾಂಗ್ರೆಸ್ ಸಂಸದ, ಪಕ್ಷದ ಹಿರಿಯ ನಾಯಕ ಬಿ. ಮಾಣಿಕ್ಯಂ ಟ್ಯಾಗೋರ್, “ರಾಜ್ಯದ ಜನರು ಯಾವ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರ ಪಡೆಯಲಿದೆಯೇ. ಒಂದೇ ಪಕ್ಷ ಬಹುಮತ ಪಡೆಯಲಿದೆಯೇ? ಎಂದು ತೀರ್ಮಾನ ಮಾಡಲಿದ್ದಾರೆ” ಎಂದರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, “20 ವರ್ಷಗಳ ಹಿಂದೆ ಅಂದರೆ 2006ರ ಚುನಾವಣೆಯ ನಂತರ, ಆಗಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನೇತೃತ್ವದ ಡಿಎಂಕೆ ಸರ್ಕಾರದೊಂದಿಗೆ ಅಧಿಕಾರ ಹಂಚಿಕೊಳ್ಳುವಂತೆ ಒತ್ತಾಯಿಸದಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ತಪ್ಪನ್ನು ಎತ್ತಿ ತೋರಿಸಿದ್ದಾರೆ” ಎಂದು ತಿಳಿಸಿದ್ದಾರೆ.
“ಆ ಸಮಯದಲ್ಲಿ ಡಿಎಂಕೆ 234 ವಿಧಾನಸಭಾ ಸ್ಥಾನಗಳಲ್ಲಿ ಕೇವಲ 96 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತಕ್ಕೆ ಹಿನ್ನಡೆ ಅನುಭವಿಸಿತ್ತು. ಆದಾಗ್ಯೂ, 34 ಕಾಂಗ್ರೆಸ್ ಶಾಸಕರು, 18 ಪಿಎಂಕೆಯ ಶಾಸಕರು ಮತ್ತು 9 ಸಿಪಿಐ(ಎಂ) ಶಾಸಕರ ಬೆಂಬಲದೊಂದಿಗೆ ಡಿಎಂಕೆ ಸರ್ಕಾರವು ತನ್ನ ಪೂರ್ಣ ಅವಧಿಯನ್ನು ಪೂರೈಸಿತ್ತು” ಎಂದು ತಿಳಿಸಿದ್ದಾರೆ.
“ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೆ ಮಾಡಿಕೊಳ್ಳದಿರುವುದು ಕಾಂಗ್ರೆಸ್ ಪಕ್ಷ ಮಾಡಿದ ತಪ್ಪು” ಎಂದು ಹೇಳುವ ಮೂಲಕ . ಮಾಣಿಕ್ಯಂ ಟ್ಯಾಗೋರ್ ಕಾಂಗ್ರೆಸ್-ಡಿಎಂಕೆ ಮೈತ್ರಿಯನ್ನು ಇನ್ನಷ್ಟು ಕಗ್ಗಂಟು ಮಾಡಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ನಾಯಕ ಪ್ರವೀಣ್ ಚಕ್ರವರ್ತಿ ತಮ್ಮ ಪೋಸ್ಟ್‌ನಲ್ಲಿ, “ಭಾರತದ ಪ್ರತಿಯೊಂದು ರಾಜ್ಯವೂ ಅಧಿಕಾರ ಹಂಚಿಕೆಗೆ ಒಪ್ಪಿರುವಾಗ, ತಮಿಳುನಾಡಿನಲ್ಲಿ ಮಾತ್ರ ಅಧಿಕಾರ ಹಂಚಿಕೆ ಬೇಡ ಎನ್ನಲು ಕಾರಣ ಏನು?” ಎಂದು ಪ್ರಶ್ನೆ ಮಾಡಿದ್ದಾರೆ.
“ಭಾರತದ ಇತರ ಜನರಂತೆ ತಮಿಳುನಾಡಿನ ಜನರಿಗೂ ಸಮ್ಮಿಶ್ರ ಸರ್ಕಾರಗಳ ಬಗ್ಗೆ ಯಾವುದೇ ಅಭ್ಯಂತರವಿಲ್ಲ. ಅಲ್ಲದೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಅಧಿಕಾರದಲ್ಲಿ ಪಾಲು ಪಡೆಯುವುದು ಅತ್ಯಂತ ಮುಖ್ಯ” ಎಂದು ಹೇಳುವ ಮೂಲಕ ಸೀಟು ಹಂಚಿಕೆ ಜೊತೆಗೆ ಅಧಿಕಾರ ಹಂಚಿಕೆ ಸೂತ್ರವನ್ನು ಮುಂದಿಟ್ಟಿದ್ದಾರೆ.
ಆದರೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ಅಧಿಕಾರ ಹಂಚಿಕೆ ವಿಷಯವಾಗಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಡಿಎಂಕೆ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ಸುದ್ದಿಯನ್ನು ಕೇವಲ ಊಹಾಪೋಹ ಎಂದು ತಳ್ಳಿಹಾಕಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಮತ್ತು ಸ್ಟಾಲಿನ್ ಮಾತುಕತೆ ನಡೆಸಿ ಅಧಿಕಾರ ಹಂಚಿಕೆ, ಸೀಟು ಹಂಚಿಕೆ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ ಅಭಿಪ್ರಾಯಗಳಿರುತ್ತವೆ ಎಂದರು.
ಕಾಂಗ್ರೆಸ್ ಪಕ್ಷದ ನಾಯಕರು ಅಧಿಕಾರ ಹಂಚಿಕೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಯವರು ತಮ್ಮ ಅಭಿಪ್ರಾಯಗಳು, ಡಿಎಂಕೆಯ ನಿಲುವು ಮತ್ತು ತಮಿಳುನಾಡಿನಲ್ಲಿ ಅನುಸರಿಸಲಾಗುತ್ತಿರುವ ಸಂಪ್ರದಾಯದ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ನಾಯಕರು ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಮಾತುಕತೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕೆಲವು ನಾಯಕರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ತಕ್ಷಣ, ಮೈತ್ರಿಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ ಎಂದು ಅನೇಕರು ನಿರೀಕ್ಷಿಸುತ್ತಿದ್ದಾರೆ. ಆದರೆ ಅಂತಹ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದರು.

