ಕೊಲಂಬೊ: ಪ್ರೇಮದಾಸ ಕ್ರೀಡಾಂಗಣದಲ್ಲಿ 2026ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯ ನಡೆದಿದ್ದು, ಪಾಕಿಸ್ತಾನ ಬೌಲಿಂಗ್ ಆಲ್ರೌಂಡರ್ನ ಸಹಾಯದಿಂದ ನೆದರ್ಲೆಂಡ್ಸ್ ವಿರುದ್ಧ 3 ವಿಕೆಟ್ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಪಾಕಿಸ್ತಾನ ಎದುರಾಳಿ ನೆದರ್ಲೆಂಡ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ನೆದರ್ಲೆಂಡ್ಸ್ 19.5 ಓವರ್ಗಳಲ್ಲಿ 147ಕ್ಕೆ ಆಲ್ಔಟ್ ಆಗಿ ಪಾಕಿಸ್ತಾನಕ್ಕೆ 148 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಮುಂದಾದ ಪಾಕಿಸ್ತಾನ ಗೆಲ್ಲಲು ಇನ್ನೂ 34 ರನ್ ಬಾಕಿ ಇರುವಾಗಲೇ ತನ್ನ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮವಾಗಿ ಬೌಲಿಂಗ್ ಆಲ್ರೌಂಡರ್ ಫಹೀಮ್ ಅಶ್ರಫ್ ಬೌಂಡರಿಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಪಾಕ್ 19.3 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕಿದೆ. ಈ ಮೂಲಕ ಪಾಕ್ ಭಾರೀ ಮುಖಭಂಗದಿಂದ ಪಾರಾಗಿದೆ.
ನೆದರ್ಲೆಂಡ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮೈಕೆಲ್ ಲೆವಿಟ್ 24, ಮ್ಯಾಕ್ಸ್ ಓಡೌಡ್ 5, ಬಾಸ್ ಡಿ ಲೀಡ್ 30, ಕಾಲಿನ್ ಆಕರ್ಮನ್ 20, ಸ್ಕಾಟ್ ಎಡ್ವರ್ಡ್ಸ್ 37, ಜಾಷ್ ಲಯನ್ ಕಾಷೆಟ್ 9, ಲಾಗನ್ ವಾನ್ ಬೀಕ್ ಡಕ್ಔಟ್, ಆರ್ಯನ್ ದತ್ 13, ರೋಲಫ್ ವಾನ್ಡರ್ ಮೆರ್ವೆ 4, ಪೌಲ್ ವಾನ್ ಮೀಕೆರನ್ ಡಕ್ಔಟ್ ಹಾಗೂ ಕೈಲ್ ಕೇನ್ ಅಜೇಯ 2 ರನ್ ಬಾರಿಸಿದರು.
ಪಾಕಿಸ್ತಾನದ ಪರ ಸಲ್ಮಾನ್ ಮಿರ್ಜಾ 3 ವಿಕೆಟ್, ಮೊಹಮ್ಮದ್ ನವಾಜ್, ಸೈಮ್ ಆಯೂಬ್ ಹಾಗೂ ಅಬ್ರಾರ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು. ಇನ್ನುಳಿದಂತೆ ಶಾಹೀನ್ ಅಫ್ರಿದಿ ಒಂದು ವಿಕೆಟ್ ಕಬಳಿಸಿದರು.
ಪಾಕಿಸ್ತಾನ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸೈಮ್ ಆಯುಬ್ 24 ರನ್ ಗಳಿಸಿದರೆ, ಶಹಿಬ್ದಾದಾ ಫರ್ಹಾನ್ 47 ರನ್ ಬಾರಿಸಿದರು. ಈ ಇಬ್ಬರನ್ನು ಹೊರತುಪಡಿಸಿದರೆ, ಬ್ಯಾಟಿಂಗ್ ವಿಭಾಗದ ಇನ್ಯಾವ ಆಟಗಾರನೂ ಸಹ ಇಪ್ಪತ್ತು ರನ್ ಮುಟ್ಟಲಿಲ್ಲ. ನಾಯಕ ಸಲ್ಮಾನ್ ಆಘಾ 12, ಬಾಬರ್ ಅಜಮ್ 15, ಉಸ್ಮಾನ್ ಖಾನ್ ಡಕ್ಔಟ್, ಮೊಹಮ್ಮದ್ ನವಾಜ್ 6 ಹಾಗೂ ಶದಬ್ ಖಾನ್ 8 ರನ್ ಗಳಿಸಿದರು. ಇಲ್ಲಿಗೆ 114 ರನ್ಗಳಿಗೆ ತನ್ನ 7 ವಿಕೆಟ್ ಕಳೆದುಕೊಂಡಿದ್ದ ಪಾಕ್ ಪರ ಬೌಲರ್ ಶಾಹೀನ್ ಅಫ್ರಿದಿ ಹಾಗೂ ಬೌಲಿಂಗ್ ಆಲ್ರೌಂಡರ್ ಫಹೀಮ್ ಅಶ್ರಫ್ ಕಣದಲ್ಲಿದ್ದರು. ಗೆಲುವಿಗೆ 23 ಎಸೆತಗಳಲ್ಲಿ 34 ರನ್ ಬೇಕಿತ್ತು. ಆದರೆ 17ನೇ ಓವರ್ನಲ್ಲಿ 1 ರನ್ ಹಾಗೂ 18ನೇ ಓವರ್ನಲ್ಲಿ 4 ರನ್ ಗಳಿಸಿದ ಪಾಕ್ ಕೊನೆಯ 12 ಎಸೆತಕ್ಕೆ 29 ರನ್ ಬಾರಿಸಬೇಕಾದ ಸಂಕಷ್ಟಕ್ಕೆ ಬಂದು ತಲುಪಿತು. ಈ ಸಂದರ್ಭದಲ್ಲಿ ಬಹುತೇಕರು ಪಾಕ್ ಸೋಲಲಿದೆ ಎಂದೇ ಊಹಿಸಲಾರಂಭಿಸಿದ್ದರು. ಆದರೆ 19ನೇ ಓವರ್ನ ಮೊದಲ ಎಸೆತಕ್ಕೆ ಭರ್ಜರಿ ಸಿಕ್ಸರ್ ಬಾರಿಸಿದ ಫಹೀಮ್ ಅಶ್ರಫ್ ನಂತರದ ಎಸೆತದಲ್ಲೇ ಜೀವದಾನ ಪಡೆದರು. ಬಳಿಕ ಅದೇ ಓವರ್ನಲ್ಲಿ ಮತ್ತೆರಡು ಸಿಕ್ಸರ್ ಹಾಗೂ ಒಂದು ಫೋರ್ ಬಾರಿಸಿದರು. ಅಲ್ಲಿಗೆ ಕೊನೆಯ ಓವರ್ಗೆ 5 ರನ್ ಬಾರಿಸಬೇಕಾದ ಹಂತಕ್ಕೆ ಪಂದ್ಯ ಬಂದಿತ್ತು. ಕೊನೆಯ ಓವರ್ನ ಮೊದಲ ಎಸೆತಕ್ಕೆ ಅಫ್ರಿದಿ ಸಿಂಗಲ್ ತೆಗೆದುಕೊಂಡರೆ, ಎರಡನೇ ಎಸೆತಕ್ಕೆ ರನ್ ಬಾರಿಸದ ಅಶ್ರಫ್ ಮೂರನೇ ಎಸೆತವನ್ನು ಬೌಂಡಿಗೆ ಅಟ್ಟಿ ತಂಡಕ್ಕೆ ಗೆಲುವು ತಂದಿಟ್ಟರು. ಅಫ್ರಿದಿ ಅಜೇಯ 5 ರನ್ ಬಾರಿಸಿದರೆ, ಫಹೀಮ್ ಅಶ್ರಫ್ 11 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 29 ರನ್ ಬಾರಿಸಿದರು.
ನೆದರ್ಲೆಂಡ್ಸ್ ಪರ ಪೌಲ್ ವಾನ್ ಮೀಕೆರನ್ ಹಾಗೂ ಆರ್ಯನ್ ದತ್ ತಲಾ ಎರಡು ವಿಕೆಟ್ ಪಡೆದರೆ, ಲಾಗನ್ ವಾನ್ ಬೀಕ್, ಕೈಲ್ ಕ್ಲೈನ್ ಹಾಗೂ ರೋಲಫ್ ವಾನ್ ಡರ್ ಮೆರ್ವೆ ತಲಾ ಒಂದೊಂದು ವಿಕೆಟೆ ಪಡೆದರು.

