ವಿಜಯಪುರ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 50ರ ಸಮೀಪವಿರುವ ಕಾರ್ ಸರ್ವೀಸ್ ಸೆಂಟರ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಸುಮಾರು 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ.
ನಗರದ ಹೊರವಲಯದ ಹೆಚ್ಎಂಕೆ (HMK) ಕಾರ್ ಸರ್ವೀಸ್ ಸೆಂಟರ್ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಹನಮಂತ ಕನಮಡಿ ಅವರಿಗೆ ಸೇರಿದ ಈ ಕೇಂದ್ರದಲ್ಲಿ ದುರಸ್ತಿಗಾಗಿ ಮತ್ತು ಸರ್ವೀಸ್ಗಾಗಿ ನಿಲ್ಲಿಸಲಾಗಿದ್ದ ಗ್ರಾಹಕರ ಕಾರುಗಳು ಬೆಂಕಿಗಾಹುತಿಯಾಗಿವೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಇಡೀ ಸರ್ವೀಸ್ ಸೆಂಟರ್ ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಂತಾಗಿತ್ತು.
ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 20ಕ್ಕೂ ಹೆಚ್ಚು ಕಾರುಗಳು ಮತ್ತು 35 ಲಕ್ಷ ರೂ. ಬೆಲೆಬಾಳುವ ಬಿಡಿಭಾಗಗಳು ಭಸ್ಮವಾಗಿವೆ.ಅದೃಷ್ಟವಶಾತ್ ಘಟನೆ ನಡೆದ ಸಮಯದಲ್ಲಿ ಸರ್ವೀಸ್ ಸೆಂಟರ್ನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಗೋಲಗುಂಬಜ್ ಮತ್ತು ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಕಿ ತಗುಲಲು ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

