ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಧರಿಸಿದ್ದ ಸೀರೆಯು ಎಲ್ಲರ ವಿಶೇಷ ಆಕರ್ಷಣೆಗೆ ಪಾತ್ರವಾಯಿತು. ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವಂತೆ ಅವರು ಯಾವಾಗಲೂ ಕೈಮಗ್ಗದ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಬಾರಿ ಅವರು ಭವ್ಯವಾದ ಕಾಂಜೀವರಂ (ಕಾಂಚೀಪುರಂ) ಪಟ್ಟು ಸೀರೆಯಲ್ಲಿ ಕಾಣಿಸಿಕೊಂಡರು.
ಪ್ರತಿ ವರ್ಷ ಬಜೆಟ್ ಸಮಯದಲ್ಲಿ ಸಚಿವರು ಭಾರತೀಯ ಹಸ್ತಕಲೆ ಮತ್ತು ಸ್ಥಳೀಯ ಕೈವೃತ್ತಿಗಳನ್ನು ಉತ್ತೇಜಿಸುವಂತಹ ಸೀರೆಗಳನ್ನು ಆಯ್ಕೆ ಮಾಡುತ್ತಾರೆ. ಇದು ಕೇಂದ್ರ ಸರ್ಕಾರದ ‘ವೋಕಲ್ ಫಾರ್ ಲೋಕಲ್’ ಅಭಿಯಾನಕ್ಕೆ ಪುಷ್ಟಿ ನೀಡುತ್ತದೆ.
ಬಂಗಾರ ಮತ್ತು ಕಾಫಿ ಬಣ್ಣದ ಬಾರ್ಡರ್ ಹೊಂದಿರುವ ಮೆಜೆಂಟಾ (Magenta) ಬಣ್ಣದ ಕಾಂಜೀವರಂ ಸೀರೆ, ಅದಕ್ಕೆ ಒಪ್ಪುವ ಗೋಲ್ಡನ್ ಬಣ್ಣದ ಬ್ಲೌಸ್ ಮತ್ತು ಶಾಲನ್ನು ಅವರು ಧರಿಸಿದ್ದರು. ತಮಿಳುನಾಡು ಮೂಲದ ಈ ಕಾಂಜೀವರಂ ಸೀರೆಗೆ 2005-2006ರಲ್ಲಿ ಭೌಗೋಳಿಕ ಸೂಚಕ (GI Tag) ಮಾನ್ಯತೆ ದೊರೆತಿದೆ.
ಟೀಕೆಗೆ ಖಡಕ್ ಉತ್ತರ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮೇಲಿನ ಚರ್ಚೆಯ ವೇಳೆ ತಮ್ಮ ಉಡುಗೆಯ ಬಗ್ಗೆ ನಡೆಯುತ್ತಿರುವ ಟೀಕೆಗಳ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.ಬಜೆಟ್ ಮಂಡನೆಯ ನಂತರ ಸಂಸತ್ತಿನಲ್ಲಿ ಅಥವಾ ಹೊರಗೆ ಸಚಿವರು ಯಾವ ಸೀರೆ ಉಟ್ಟಿದ್ದಾರೆ, ಅದರ ಬೆಲೆ ಎಷ್ಟು ಅಥವಾ ಅದರ ಬಣ್ಣ ಯಾವುದು ಎಂಬ ಬಗ್ಗೆ ನಡೆಯುವ ಚರ್ಚೆಗಳು ಅರ್ಥಹೀನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜನಪ್ರತಿನಿಧಿಗಳು ಮತ್ತು ವಿರೋಧ ಪಕ್ಷದ ನಾಯಕರು ದೇಶದ ಆರ್ಥಿಕ ಪರಿಸ್ಥಿತಿ, ಬಜೆಟ್ನಲ್ಲಿರುವ ಯೋಜನೆಗಳು ಮತ್ತು ಜನಸಾಮಾನ್ಯರಿಗೆ ಸಿಗುವ ಲಾಭಗಳ ಬಗ್ಗೆ ಚರ್ಚಿಸಬೇಕು. ಅದನ್ನು ಬಿಟ್ಟು ನನ್ನ ಸೀರೆಯ ಮೇಲೆ ಗಮನ ಹರಿಸುವುದು ಸರಿಯಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ಬಾರಿ ಬಜೆಟ್ ಮಂಡಿಸುವಾಗಲೂ ನಿರ್ಮಲಾ ಸೀತಾರಾಮನ್ ಅವರು ಧರಿಸುವ ಸಾಂಪ್ರದಾಯಿಕ ಕೈಮಗ್ಗದ ಸೀರೆಗಳು ಸುದ್ದಿಯಾಗುತ್ತವೆ. ಆದರೆ ಈ ಬಾರಿ ಇದನ್ನು ರಾಜಕೀಯವಾಗಿ ಟೀಕಿಸಿದವರಿಗೆ ಅವರು ಖಡಕ್ ಆಗಿಯೇ ಉತ್ತರ ನೀಡಿದ್ದಾರೆ.
ಕಳೆದ ವರ್ಷದ ಸೀರೆಯ ಹಿನ್ನೆಲೆ
2025ರ ಬಜೆಟ್ ಮಂಡನೆಯ ವೇಳೆ ಸಚಿವರು ಬಂಗಾರದ ಅಂಚಿನ ಮಧುಬನಿ ಹ್ಯಾಂಡ್-ಪೇಂಟ್ ಐವರಿ (ಆನೆದಂತದ ಬಣ್ಣ) ಸೀರೆಯನ್ನು ಧರಿಸಿದ್ದರು. ಮಿಥಿಲಾ ಕಲೆ ಎಂದೂ ಕರೆಯಲ್ಪಡುವ ಈ ಸೀರೆಯನ್ನು ದಲಿತ ಮಲ್ಲಾ ಸಮುದಾಯದ ಪದ್ಮಶ್ರೀ ಪ್ರಶಸ್ತಿ ವಿಜೇತೆ ದುಲಾರಿ ದೇವಿ ಅವರು ಸಚಿವರಿಗೆ ಉಡುಗೊರೆಯಾಗಿ ನೀಡಿದ್ದರು.
ಕಾಂಚೀಪುರಂ ಸೀರೆಯ ಇತಿಹಾಸ ಮತ್ತು ಹಿರಿಮೆ
ಕಾಂಚೀಪುರಂ ಸೀರೆಗಳನ್ನು “ಸೀರೆಗಳ ರಾಣಿ” (Queen of Sarees) ಎಂದು ಕರೆಯಲಾಗುತ್ತದೆ. ಇದರ ಇತಿಹಾಸವು 10ನೇ ಶತಮಾನದಷ್ಟು ಹಳೆಯದಾಗಿದೆ.
ಪುರಾತನ ಉಲ್ಲೇಖ: ಋಗ್ವೇದದಂತಹ ಪ್ರಾಚೀನ ಗ್ರಂಥಗಳಲ್ಲಿಯೂ ನೇಕಾರರ (ತಂತುವಾಯ) ಕಲೆಯ ಬಗ್ಗೆ ಉಲ್ಲೇಖಗಳಿವೆ. ಆರಂಭದಲ್ಲಿ ಆಂಧ್ರಪ್ರದೇಶದ ಸಾಲಿಯಾರ್ ಸಮುದಾಯದವರು ಈ ಸೀರೆಗಳನ್ನು ನೇಯುತ್ತಿದ್ದರು ಎಂದು ಹೇಳಲಾಗುತ್ತದೆ.
ತಯಾರಿಕಾ ವಿಧಾನ: ಈ ಸೀರೆಗಳನ್ನು ತಮಿಳುನಾಡಿನ ಕಾಂಚೀಪುರಂನಲ್ಲಿ ತಯಾರಿಸಲಾಗುತ್ತದೆ. ಕರ್ನಾಟಕದಿಂದ ತರಿಸುವ ಮಲ್ಬರಿ ರೇಷ್ಮೆ ಮತ್ತು ಗುಜರಾತ್ನ ಸೂರತ್ನಿಂದ ತರಿಸುವ ಜರಿ ದಾರಗಳನ್ನು ಬಳಸಿ ಕೈಯಿಂದ ನೇಯಲಾಗುತ್ತದೆ.
.

