ಬೆಂಗಳೂರು: ಸ್ಯಾಂಡಲ್ ವುಡ್ ಪ್ರತಿಷ್ಠಿತ ಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಮತ್ತು ಮಾಜಿ ಸಚಿವೆ ಜಯಮಾಲಾ ಅವರು ಇಂದು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು.
ಶನಿವಾರ (ಜನವರಿ 31, 2026) ನಡೆದ ಅತ್ಯಂತ ಕುತೂಹಲಕಾರಿ ಚುನಾವಣೆಯಲ್ಲಿ ಜಯಮಾಲಾ ಅವರು ತಮ್ಮ ಪ್ರತಿಸ್ಪರ್ಧಿ, ನಿರ್ಮಾಪಕ ಭಾ.ಮ. ಹರೀಶ್ ಅವರ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದರು. ಒಟ್ಟು ಚಲಾವಣೆಯಾದ 813 ಮತಗಳಲ್ಲಿ ಜಯಮಾಲಾ ಅವರು 512 ಮತಗಳನ್ನು ಪಡೆಯುವ ಮೂಲಕ ಎರಡನೇ ಬಾರಿಗೆ ಮಂಡಳಿಯ ಅಧ್ಯಕ್ಷ ಪಟ್ಟಕ್ಕೇರಿದ್ದಾರೆ.
2008ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದ ಜಯಮಾಲಾ, ಈಗ 18 ವರ್ಷಗಳ ನಂತರ ಮತ್ತೆ ವಾಣಿಜ್ಯ ಮಂಡಳಿಯ ಚುಕ್ಕಾಣಿ ಹಿಡಿದಿದ್ದಾರೆ.ಉಪಾಧ್ಯಕ್ಷರಾಗಿ ನಿರ್ಮಾಪಕ ಸುಂದರ್ ರಾಜ್, ವಿತರಕರ ವಲಯದಿಂದ ಕೆ. ಮಂಜು ಮತ್ತು ಪ್ರದರ್ಶಕರ ವಲಯದಿಂದ ಕಿಶೋರ್ ಆಯ್ಕೆಯಾಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ನಟರಾದ ಶಿವರಾಜ್ಕುಮಾರ್, ಡಾಲಿ ಧನಂಜಯ್ ಸೇರಿದಂತೆ ಚಿತ್ರರಂಗದ ಘಟಾನುಘಟಿಗಳು ಪಾಲ್ಗೊಂಡು ಮತ ಚಲಾಯಿಸಿದ್ದರು.
ಸವಾಲುಗಳ ಹಾದಿ: ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಜಯಮಾಲಾ ಅವರು, “ಕನ್ನಡ ಚಿತ್ರರಂಗ ಎದುರಿಸುತ್ತಿರುವ ವಿತರಣಾ ಸಮಸ್ಯೆಗಳು, ಚಿತ್ರಮಂದಿರಗಳ ಕೊರತೆ ಮತ್ತು ಹೊಸ ತಂತ್ರಜ್ಞಾನದ ಸವಾಲುಗಳನ್ನು ಎದುರಿಸಲು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದಾಗಿ” ಭರವಸೆ ನೀಡಿದರು.
ಡಾ.ರಾಜ್ ಗೆ ನಾಯಕಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ
ಡಾ.ರಾಜ್ ಕುಮಾರ್ ಅವರ ಜೊತೆ ‘ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಶಂಕರ್ ಗುರು, ಗಿರಿಕನ್ಯೆ, ದಾರಿ ತಪ್ಪಿದ ಮಗ, ಅಂಥ, ಚಂಡಿ ಚಾಮುಂಡಿ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ಇವರು ನಿರ್ಮಿಸಿದ ‘ತಾಯಿ ಸಾಹೇಬ’ ಚಿತ್ರ ರಾಷ್ಟ್ರಮಟ್ಟದಲ್ಲಿ ‘ಸ್ವರ್ಣ ಕಮಲ’ ಪ್ರಶಸ್ತಿ ಪಡೆಯಿತು. ಇದರಲ್ಲಿನ ನಟನೆಗಾಗಿ ಇವರಿಗೆ ‘ವಿಶೇಷ ಜ್ಯೂರಿ ಪ್ರಶಸ್ತಿ’ ಕೂಡ ಲಭಿಸಿದೆ. ಮಕ್ಕಳ ಚಿತ್ರ ‘ತುತ್ತೂರಿ’ ಕೂಡ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

