ದಾವೋಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸ್ವಿಟ್ಜರ್‌ಲ್ಯಾಂಡ್ ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ(WEF) ನೇಪಥ್ಯದಲ್ಲಿ ತಮ್ಮ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿಯಾಗಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕೊನೆಗೊಳ್ಳಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ. ಅಲ್ಲದೇ ರಷ್ಯಾದ ವ್ಲಾಡಿಮಿರ್ ಪುಟಿನ್ ಅವರನ್ನು ಶೀಘ್ರದಲ್ಲೇ ಭೇಟಿಯಾಗುವುದಾಗಿ ಹೇಳಿದ್ದು, ಫೆಬ್ರವರಿ 2022ರಲ್ಲಿ ಭುಗಿಲೆದ್ದ ಸಂಘರ್ಷವನ್ನು ಕೊನೆಗೊಳಿಸುವ ಮಾರ್ಗಗಳನ್ನು ಚರ್ಚಿಸಿದ್ದಾರೆ.
ನಾನು ಇಲ್ಲಿ ಅಧ್ಯಕ್ಷ ಝೆಲೆನ್ಸ್ಕಿಯನ್ನು ಭೇಟಿಯಾದೆ. ಸಭೆ ಚೆನ್ನಾಗಿತ್ತು. ನಾವು(ಯುಎಸ್ ನಿಯೋಗ) ಇಂದು ಅಥವಾ ನಾಳೆ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುತ್ತಿದ್ದೇವೆ. ಯುದ್ಧ ಕೊನೆಗೊಳ್ಳಬೇಕು. ಬಹಳಷ್ಟು ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯ ಸಂದರ್ಭದಲ್ಲಿ ಟ್ರಂಪ್ ಪುಟಿನ್ ಅವರನ್ನು ಭೇಟಿಯಾಗಿದ್ದರು. ಇಬ್ಬರು ನಾಯಕರು ಮಾತುಕತೆಗಳನ್ನು ಅದ್ಭುತವೆಂದು ಬಣ್ಣಿಸಿದ್ದರು ಮತ್ತು ಅವರು ಮತ್ತೊಂದು ಸಭೆ ನಡೆಸುವುದಾಗಿ ಹೇಳಿದ್ದರು. ಟ್ರಂಪ್ ಅವರು, ಪುಟಿನ್ ಮತ್ತು ಝೆಲೆನ್ಸ್ಕಿ ನಡುವೆ ಸಂಭಾವ್ಯ ತ್ರಿಪಕ್ಷೀಯ ಸಭೆಯ ಬಗ್ಗೆಯೂ ಸೂಚಿಸಿದ್ದರು. ಆದಾಗ್ಯೂ, ಅಲಾಸ್ಕಾ ಶೃಂಗಸಭೆಯ ನಂತರ ಮಾತುಕತೆಗಳಿಗೆ ಹೊಡೆತ ಬಿದ್ದಿದೆ, ಟ್ರಂಪ್ ಸಾಂದರ್ಭಿಕವಾಗಿ ರಷ್ಯಾದ ಕಡೆಯನ್ನು ಟೀಕಿಸುತ್ತಿದ್ದಾರೆ.

