ರಾಯಚೂರು: ಲಾರಿ, ಎರಡು ಗೂಡ್ಸ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಐದು ಜನ ಸಾವನ್ನಪ್ಪಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕನ್ನಾರಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮೃತರು, ಗಾಯಾಳುಗಳ ಗುರುತು ಪತ್ತೆಯಾಗಿಲ್ಲ. ಬೊಲೆರೊ ಪಿಕಪ್ ವಾಹನ, ಟಾಟಾ ಏಸ್ ಗೆ ಲಾರಿ ಡಿಕ್ಕಿ ಹೊಡೆದಿದೆ. ಬೊಲೆರೊ ಪಿಕಪ್ ವಾಹನ, ಟಾಟಾ ಏಸ್ ವಾಹನಗಳಲ್ಲಿ ಕುರಿಗಳನ್ನು ತುಂಬಿಸಿಕೊಂಡು ಸಾಗಿಸಲಾಗುತ್ತಿತ್ತು. ಒಂದರ ಹಿಂದೆ ಒಂದರಂತೆ ಸಿಂಧನೂರಿನಿಂದ ಬಳ್ಳಾರಿ ಕಡೆಗೆ ತೆರಳುತ್ತಿದ್ದ ವಾಹನಗಳಿಗೆ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕೆಲವು ಕುರಿಗಳು ಮೃತಪಟ್ಟಿವೆ. ಸಿಂಧನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

