ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಅಧಿಕಾರ ಹಸ್ತಾಂತರ ವಿಚಾರಗಳು ಮತ್ತೆ ಮುನ್ನೆಲೆಗೆ ಬರುತ್ತಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸದ ಬಳಿಕ ಈ ಕುರಿತ ಚರ್ಚೆಗಳು ಮತ್ತೆ ಜೋರಾಗಿವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸಿಎಂ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್, ನಮ್ಮಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಸಿಎಂ ಹುದ್ದೆ ಅಷ್ಟು ಸುಲಭವಾಗಿ ಸಿಗೋದಿಲ್ಲ. ನಮ್ಮಣ್ಣನ ಹಣೆಬರಹದಲ್ಲಿ ಬರೆದಿದ್ದರೆ ಸಿಎಂ ಆಗ್ತಾರೆ. ಈ ಹಿಂದೆಯೂ ನಾನು ಇದನ್ನೇ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಅಧಿಕಾರ ಎನ್ನುವುದು ಯಾರಿಗೂ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಎಲ್ಲವನ್ನೂ ತಾಳ್ಮೆಯಿಂದ ನೋಡಬೇಕು, ತಾಳ್ಮೆಯಿಂದ ಇರಬೇಕು ಎಂದರು.
ನಮ್ಮ ಗುರಿ ಇರುವುದು 2028ರ ಚುನಾವಣೆ. ತಾಳ್ಮೆ ಇರಬೇಕು. ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಕೆಲವರು ವ್ಯಕ್ತಿಗೆ ಮಾತ್ರ ನಿಷ್ಠೆಯಿಂದ ಇರುತ್ತಾರೆ. ಜಾತಿ ಮೇಲೆ ರಾಜಕಾರಣ ಅಭಿವೃದ್ಧಿಗೆ ಕುಂಠಿತವಾಗುತ್ತದೆ. ಕೆಲವರು ಅಧಿಕಾರಕ್ಕೋಸ್ಕರ ಇರುತ್ತಾರೆ. ಡಿ.ಕೆ.ಶಿವಕುಮಾರ್ ಎಲ್ಲಾ ತರಹದ ನೋವು, ಕಷ್ಟ ನೋಡಿದ್ದಾರೆ. ಮೈಸೂರಿಗೆ ರಾಹುಲ್ ಗಾಂಧಿ ಬಂದಾಗ ಹೇಳಿದ್ದಾರೆ. ಪಕ್ಷ ಹಾಗೂ ಶಾಸಕರ ಹಿತದೃಷ್ಟಿಯಿಂದ ಕಾಯುತ್ತಿದ್ದೇವೆ. ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕುರ್ಚಿಯನ್ನು ಯಾರೂ ಅಷ್ಟು ಸುಲಭವಾಗಿ ಬಿಡಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಬಿಡಲ್ಲ. ರಾಜಕಾರಣಿಯಾದವರಿಗೆ ನೆಮ್ಮದಿ, ಊಟ, ನಿದ್ದೆ ಯಾವುದೂ ಇರುವುದಿಲ್ಲ. ಹಾಗಂತ ಎಲ್ಲದಕ್ಕೂ ತಾಳ್ಮೆಯೇ ಮುಖ್ಯವಲ್ಲ. ಕೆಲ ಸಂದರ್ಭಗಳಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

