ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಭರಣ ಮಳಿಗೆಯೊಂದರಲ್ಲಿ ಡಿಸೆಂಬರ್ 28ರಂದು ನಡೆದ 10 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಿಹಾರ ರಾಜ್ಯದ ಬಾಗಲ್ಪುರ್ ಜಿಲ್ಲೆಯ ಪಂಕಜ್ ಕುಮಾರ್, ದರ್ಬಾಂಗ್ ಜಿಲ್ಲೆಯ ಹೃಷಿಕೇಶ್ ಸಿಂಗ್ ಬಂಧಿತ ಆರೋಪಿಗಳು. ಕರ್ನಾಟಕ ಪೊಲೀಸರು ಬಿಹಾರದ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಿಂದ ಚಿನ್ನಾಭರಣ ಮಳಿಗೆಯಲ್ಲಿ ಕಳವು ಮಾಡಿದ್ದ ಉಂಗುರ, ಚಿನ್ನದ ಸರ, ಒಂದು ಲಕ್ಷ ರೂಪಾಯಿ ನಗದು, ಬೈಕ್ ವಶಕ್ಕೆ ಪಡೆಯಲಾಗಿದೆ. ಪಂಕಜ್ ಕುಮಾರ್ ವಿರುದ್ಧ ಕರ್ನಾಟಕ, ಬಿಹಾರ, ಜಾರ್ಖಂಡ್, ರಾಜಸ್ಥಾನ ರಾಜ್ಯಗಳಲ್ಲಿ ಕೊಲೆ ಕಳ್ಳತನ ಸೇರಿದಂತೆ ಹಲವು ಪ್ರಕರಣ ದಾಖಲಾಗಿವೆ. ಹೃಷಿಕೇಶ್ ವಿರುದ್ಧ ಬಿಹಾರದಲ್ಲಿ ನಾಲ್ಕು ಕ್ರಿಮಿನಲ್ ಪ್ರಕರಣ ದಾಖಲಾಗಿವೆ.
ಡಿಸೆಂಬರ್ 28 ರಂದು ಎರಡು ಬೈಕ್ ನಲ್ಲಿ ಬಂದಿದ್ದ ಐದು ದರೋಡೆಕೋರರ ಗುಂಪು ಹಾಡಹಗಲೇ ಹುಣಸೂರಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಎಂಬ ಆಭರಣ ಮಳಿಗೆಗೆ ನುಗ್ಗಿ ಗನ್ ಹಿಡಿದು ಸಿಬ್ಬಂದಿ ಮತ್ತು ಗ್ರಾಹಕರನ್ನು ಬೆದರಿಸಿ ಕೇವಲ ನಾಲ್ಕು ನಿಮಿಷದಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
150 ನೆಕ್ಲೆಸ್, 70 ಉಂಗುರ, 64 ಬಳೆ, 65 ಚಿನ್ನದ ಸರ, 19 ಕರಿಮಣಿ ಸರ, 13 ವಜ್ರದ ಉಂಗುರ, 17 ಕಿವಿಯೋಲೆ, 12 ಲಾಕೆಟ್, 12 ಕಾಲು ಚೈನು, ಎಂಟು ಬ್ರೇಸ್ ಲೈಟ್ ಕಳುವಾಗಿವೆ ಎಂದು ಅಂಗಡಿ ಮಾಲೀಕ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಬಿಹಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

