ಕಾರವಾರ: ತಾಯಿಯ ಜತೆ ಜಗಳವಾಡುತ್ತಿದ್ದ ಮಲತಂದೆಗೆ ಮಗ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ತಟ್ಟಿಹಳ್ಳಿಯಲ್ಲಿ ನಡೆದಿದೆ.
ಮಲತಂದೆ ಶಿವಾನಂದ ರಾಮಣ್ಣ(48) ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿ ಮಲ ಮಗ ಶಿವರಾಜ್ ಪರಸಪ್ಪ ಗುಡಿಹಾಳ(27) ಪರಾರಿಯಾಗಿದ್ದಾನೆ.
ನಾಗಮ್ಮ ಕಲಕಟ್ಟಿಯನ್ನು ಲಾರಿ ಚಾಲಕ ಶಿವಾನಂದ ಮೂರನೇ ವಿವಾಹವಾಗಿದ್ದ. ಒಂದೂವರೆ ವರ್ಷದ ಹಿಂದೆ ಹಾನಗಲ್ ಮೂಲದ ನಾಗಮ್ಮನ ಜೊತೆ ಮದುವೆಯಾಗಿತ್ತು. ಆದರೆ, ಪತ್ನಿಯ ಮೇಲೆ ಸಂಶಯದಿಂದ ಶಿವಾನಂದ ಪ್ರತಿದಿನ ಗಲಾಟೆ ಮಾಡುತ್ತಿದ್ದ.
ತಾಯಿಯ ಜತೆ ಗಲಾಟೆ ಮಾಡುತ್ತಿದ್ದ ಮಲ ತಂದೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದ್ದು, ಗಂಭೀರ ಗಾಯಗೊಂಡಿರುವ ಶಿವಾನಂದನನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

