ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಜನತೆಗೆ ಸಂತಸದ ಸುದ್ದಿ. ನಮ್ಮ ಮೆಟ್ರೋದ ಬಹುನಿರೀಕ್ಷಿತ ಆಂರೇಂಜ್ ಲೈನ್ ಯೋಜನೆಗೆ ಬಿಎಂಆರ್ ಸಿ ಎಲ್ ಟೆಂಡರ್ ಆಹ್ವಾನಿಸಿದೆ.
ಫೆಬ್ರವರಿ 20ರಿಂದ 25ರ ಒಳಗೆ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಮೂರು ಪ್ಯಾಕೇಜ್ ಗಳಲ್ಲಿ ಬಿಎಂ ಆರ್ ಸಿ ಎಲ್ ಟೆಂಡರ್ ಕರೆದಿದ್ದು, ಪ್ರತ್ಯೇಕ ಹಣ ಬಿಡುಗಡೆ ಮಾಡಲಾಗಿದೆ.
ಜೆ.ಪಿ ನಗರದ 4ನೇ ಹಂತದಿಂದ ನಾಗರಭಾವಿವರೆಗಿನ ಕಾಮಗಾರಿಯನ್ನು ಆರಂಜ್ ಲೈನ್ ಒಳಗೊಂಡಿದೆ. ಪ್ಯಾಕೇಜ್ 1 ಜೆ.ಪಿ ನಗರ 4ನೇ ಹಂತದಿಂದ ಕಾಮಾಕ್ಯವರೆಗೆ ಡಬಲ್ ಡೆಕ್ಕರ್ ಹಾಗೂ ಡಾಲರ್ಸ್ ಕಾಲೋನಿ ಫ್ಲೈಓವರ್ ತೆರವು ಒಳಗೊಂಡು ಒಟ್ಟು ಜೆ.ಪಿ. ನಗರ 5ನೇ ಹಂತ, ಜೆ.ಪಿ. ನಗರ, ಕಾದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್ ನಿಲ್ದಾಣಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್ನ ಮೊತ್ತ 1,375 ಕೋಟಿ ರೂಪಾಯಿಗಳು.
ಪ್ಯಾಕೇಜ್ 2 ಹೊಸಕೆರಹಳ್ಳಿಯಿಂದ ನಾಗರಭಾವಿ ಸರ್ಕಲ್ವರೆಗೆ ಡಬಲ್ ಡೆಕ್ಕರ್ನ ಒಳಗೊಂಡಿದೆ. 1,396 ಕೋಟಿ ಮೊತ್ತದ ಈ ಪ್ಯಾಕೇಜ್ ಹೊಸಕೆರಹಳ್ಳಿ, ದ್ವಾರಕಾನಗರ, ಮೈಸೂರು ರಸ್ತೆ ಮತ್ತು ನಾಗರಭಾವಿ ಸರ್ಕಲ್ ನಿಲ್ದಾಣಗಳು ಸೇರಿವೆ.
ಪ್ಯಾಕೇಜ್ 3ರ ಕಾರಿಡಾರ್ 1 ವಿನಾಯಕ ಲೇಔಟ್ನಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ವರೆಗೆ ಒಟ್ಟು 3 ನಿಲ್ದಾಣಗಳನ್ನು ಒಳಗೊಂಡಿದೆ. ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, ಬಿಡಿಎ ಕಾಂಪ್ಲೆಕ್ಸ್ ನಾಗರಭಾವಿ ನಿಲ್ದಾಣ ಇದರಲ್ಲಿ ಸೇರಿವೆ. ಹಾಗೆಯೇ ಪ್ಯಾಕೇಜ್ 3ರ ಕಾರಿಡಾರ್ 2 ಸುಂಕದಕಟ್ಟೆ ನಿಲ್ದಾಣ , ಸುಂಕದಕಟ್ಟೆ ಡಿಪೋ ಪ್ರವೇಶ ಮಾರ್ಗ ಮತ್ತು ನಿರ್ಗಮನ ಮಾರ್ಗ ಒಳಗೊಂಡಿದ್ದು, ಇದರ ಒಟ್ಟು ಮೊತ್ತ 1415 ಕೋಟಿ ರೂಪಾಯಿಗಳಾಗಿವೆ.
2024ರ ಆಗಸ್ಟ್ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು.

